ಜನಾಶೀರ್ವಾದ ಯಾತ್ರೆ ಶುರುಮಾಡಿದ್ದಕ್ಕೆ ಐಟಿ ಕಾಟ, ಇಡಿ- ಸಿಬಿಐಗೆ ರೆಫರ್ ಮಾಡ್ಲಿ, ಪರಪ್ಪನ ಅಗ್ರಹಾರಕ್ಕಾದ್ರೂ ಕಳಿಸಲಿ ಹೆದ್ರಲ್ಲ- ಡಿಕೆಶಿ

ಬೆಂಗಳೂರು: ಐಟಿ ನೋಟಿಸ್ ವಿಚಾರಕ್ಕೆ ಸಂಬಂಧಿಸಿದಂತೆ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು, ಜನಾಶೀರ್ವಾದ ಯಾತ್ರೆ ಶುರುಮಾಡಿದ್ದಕ್ಕೆ ಐಟಿ ಕಾಟ ಶುರುವಾಗಿದೆ. ನಾನು ಯಾರಿಗೂ ಹೆದರುವ ಪ್ರಶ್ನೆಯೇ ಇಲ್ಲ. ಜಾರಿ ನಿರ್ದೇಶನಾಲಯ(ಇಡಿ), ಸಿಬಿಐಗಾದ್ರೂ ರೆಫರ್ ಮಾಡಲಿ, ಪರಪ್ಪನ ಅಗ್ರಹಾರಕ್ಕಾದ್ರೂ ಕಳುಹಿಸಲಿ, ಇದಕ್ಕೆಲ್ಲಾ ಈ ಡಿಕೆ ಶಿವಕುಮಾರ್ ಜಗ್ಗೋ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.

ಬೆಂಗಳೂರಲ್ಲಿ ಮಾತನಾಡಿದ ಅವರು, ಆಗಸ್ಟ್ 2 ರಂದು ಐಟಿ ದಾಳಿ ಆಗಿತ್ತು. ಪಕ್ಷ ನೀಡಿದ ಜವಾಬ್ದಾರಿಯಂತೆ ಗುಜರಾತ್ ಶಾಸಕರು ನಮ್ಮ ಆಶ್ರಯದಲ್ಲಿದ್ದರು. ಆಗ ಐಟಿ ರೇಡ್ ಆಗಿತ್ತು. ಸಹಜವಾಗಿ ಕೆಲವು ಪೇಪರ್ ಗಳು ಇದ್ದವು. ಐಟಿಯವರು ಏನೇನು ತಗೊಂಡು ಹೋಗಿದ್ದಾರೆ ನನಗೆ ಗೊತ್ತಿಲ್ಲ. ಮಾಧ್ಯಮಗಳಲ್ಲಿ ನೋಡಿದ ನಂತರ ನಿನ್ನೆ ಇದು ನನಗೆ ಗೊತ್ತಾಗಿದೆ. ಜನಾಶಿರ್ವಾದ ಯಾತ್ರೆ ಶುರು ಮಾಡಿದ್ದಕ್ಕೆ ಇದು ಶುರು ಆಗಿದೆ. ನಾನು ನಂಬಿರುವ ದೇವರು, ಜನ ಹಾಗೂ ಶಕ್ತಿ ನನ್ನನ್ನು ಕಾಪಾಡುತ್ತೆ. ಸದ್ಯಕ್ಕೆ ಏನು ಜಾಸ್ತಿ ಮಾತಾಡಲ್ಲ ಎಂದು ಹೇಳಿದ್ರು.

ಅಲ್ಲಿ ಏನು ಹರಿದು ಹಾಕಿದೆ ಅಂತ ಯಾರು ನೋಡಿದ್ದಾರೆ? ಆ ಮಾಹಿತಿ ಕೇಂದ್ರ ಸಚಿವರಿಗೆ, ಪಾರ್ಲಿಮೆಂಟ್‍ಗೆ ಹೇಗೆ ಹೋಯ್ತು? ಯಾರ್ಯಾರಿಗೆ ಖುಷಿ ಆಗಿದೆಯೋ ಆಗಲಿ. ನಾನು ಯಾವುದಕ್ಕೂ ಬಗ್ಗಲ್ಲ ಅಂತ ಹೇಳಿದ್ರು.

ಬೇರೆ ಬೇರೆ ಪಕ್ಷದವರು ಬೇರೆ ಬೇರೆ ಮಾತಾಡಿದ್ದಾರೆ, ಎಲ್ಲಾ ಗೊತ್ತು. ಅವನು ಚುನಾವಣೆ ಟೈಮಲ್ಲಿ ಜೈಲಿಗೆ ಹೋಗ್ತಾನೆ ಅಂದಿದ್ದಾರೆ. ಎಲ್ಲಾ ನನಗೆ ಗೊತ್ತು, ನಾನು ಅದರ ಬಗ್ಗೆ ಮಾತಾಡಲ್ಲ. ನಾನು ಧರ್ಮದಿಂದ ನಡೆಯುವವನು. ಧರ್ಮದ ಹಾದಿಯಲ್ಲೇ ರಾಜಕಾರಣ ಮಾಡುವವನು. ಬಿಜೆಪಿ ಐಟಿ ಬಳಸುತ್ತಿದೆ ಎಂಬುದರಲ್ಲಿ ತೆರೆ ಮರೆ ಏನು ಇಲ್ಲ. ನಾನು ಡಿಸಿಪ್ಲಿನ್ಡ್ ಟ್ಯಾಕ್ಸ್ ಪೇಯರ್. ನನ್ನ ಎಲ್ಲಾ ವ್ಯವಹಾರ ಪಾರದರ್ಶಕ. ಜೈಲು, ಸಿಬಿಐ, ಇಡಿ, ವಿರೋಧ ಪಕ್ಷ ಇದಕ್ಕೆಲ್ಲಾ ಟೆನ್ಸ್ ಆಗಲ್ಲ. ನಾನು ಯಾರು ಅಂತ ನಿಮಗೆ ಗೊತ್ತಿಲ್ಲ. ಹಳ್ಳಿಯಿಂದ ನಡೆದುಕೊಂಡು ಬಂದಿದ್ದೇನೆ. ರಾಜಕಾರಣ ಮಾಡಬೇಕು ಅಂತಲೇ ಬೆಂಗಳೂರಿಗೆ ಬಂದಿದ್ದೇನೆ ಎಂದರು.

ನಾನು ಏನನ್ನು ಹರಿದು ಹಾಕಿದ್ದೀನೋ ಇಲ್ಲವೋ. ಆದರೆ ಕೇಸ್ ಹಾಕಲು 7 ತಿಂಗಳು ಬೇಕೇನ್ರಿ? ನನ್ನ ವಿರುದ್ಧ ಬಿಜೆಪಿ ನಾಯಕರು ತೆರೆ ಮರೆಯಲ್ಲಿ ಅಲ್ಲ ಬಹಿರಂಗವಾಗೇ ಷಡ್ಯಂತ್ರ ಮಾಡುತ್ತಿರೋದು ಎಲ್ಲರಿಗೂ ಗೊತ್ತೇ ಇದೆ. ನಾನು ನೇರವಾಗಿ ಯಾರ ವಿರುದ್ಧ ಏನೂ ಹೇಳಲ್ಲ. ಐಟಿ ಪಂಚನಾಮೆಯ ವರದಿಯೇ ಇನ್ನೂ ಬಂದಿಲ್ಲ. ನನಗೂ ಕಾನೂನು ಗೊತ್ತಿದೆ. ನಾನು ಕಾನೂನು ಉಲ್ಲಂಘಿಸಿಲ್ಲ ಎಂದು ಡಿಕೆಶಿ ಹೇಳಿದ್ರು. ಇದನ್ನೂ ಓದಿ: ಪವರ್ ಮಿನಿಸ್ಟರ್ ಗೆ ಐಟಿ ಇಲಾಖೆಯಿಂದ ಬಿಗ್ ಶಾಕ್!

 

Comments

Leave a Reply

Your email address will not be published. Required fields are marked *