ಮಂಡ್ಯ: ಅದು ವಿಶ್ವ ಮಟ್ಟದಲ್ಲಿ ಪ್ರಸಿದ್ಧಿ ಪಡೆದುಕೊಂಡಿರುವ ಪ್ರವಾಸಿ ಸ್ಥಳ. ಆ ಸ್ಥಳದಲ್ಲಿ ಇಚೆಗೆ ಚಿರತೆ (Leopard) ಕಾಣಿಸಿಕೊಂಡಿದ್ದು, 15 ದಿನಗಳಿಂದ ಬಾಗಿಲು ಮುಚ್ಚಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಚಿರತೆ ಸೆರೆ ಹಿಡಿಯಲು ಬೇಜವಾಬ್ದಾರಿತನ ಪ್ರದರ್ಶನ ಮಾಡುತ್ತಾ ಇದ್ದಾರೆ. ಇತ್ತ ಪ್ರವಾಸಿ ಸ್ಥಳವನ್ನು ಜೀವನೋಪಾಯಕ್ಕಾಗಿ ನಂಬಿಕೊಂಡಿದ್ದ ವ್ಯಾಪಾರಸ್ಥರು ಕಣ್ಣೀರು ಹಾಕುತ್ತ ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.

ಮಾನವ ಮತ್ತು ಕಾಡು ಪ್ರಾಣಿಗಳ ಸಂಘರ್ಷ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಈ ಸಂಘರ್ಷದಿಂದ ಕೆಲ ಕಡೆ ಕಾಡು ಪ್ರಾಣಿಗಳಿಗೆ ತೊಂದರೆಯಾದರೆ, ಇನ್ನೂ ಕೆಲವೆಡೆ ಮನುಷ್ಯರಿಗೆ ತೊಂದರೆಯಾಗುತ್ತಿದೆ. ಇಂತಹದೇ ಪರಿಸ್ಥಿತಿ ನಿರ್ಮಾಣವಾಗಿರುವುದು ಮಂಡ್ಯ (Mandya) ಜಿಲ್ಲೆಯ ಶ್ರೀರಂಗಪಟ್ಟಣ (Srirangapatna) ತಾಲೂಕಿನ ಕೆಆರ್‌ಎಸ್‌ನ (KRS) ಬೃಂದಾವನದಲ್ಲಿ (Brindavan Garden). ಕಳೆದ 1 ತಿಂಗಳಿನಿಂದ ಕೆಆರ್‌ಎಸ್ ಹಾಗೂ ಬೃಂದಾವನದಲ್ಲಿ ಚಿರತೆ ಕಣ್ಣಾಮುಚ್ಚಾಲೆಯಾಡುತ್ತಿದೆ. ಇದರಿಂದ ಕಳೆದ 15 ದಿನಗಳಿಂದ ಸುಧೀರ್ಘವಾಗಿ ಬೃಂದಾವನಕ್ಕೆ ಪ್ರವಾಸಿಗರ ನಿರ್ಬಂಧ ಹೇರಲಾಗಿದೆ.

ಅರಣ್ಯ ಇಲಾಖೆಯ ಅಧಿಕಾರಿಗಳ ನಿರ್ದೇಶನದ ಮೇರೆಗೆ ಕಾವೇರಿ ನೀರಾವರಿ ನಿಗಮ ಬೃಂದಾವನವನ್ನು ಬಂದ್ ಮಾಡಿದೆ. ಇತ್ತ ನಾವು ಚಿರತೆಯನ್ನು ಹಿಡಿಯುತ್ತೇವೆ ಎಂದು ಕಾಟಚಾರಕ್ಕೆ 8 ಬೋನ್‌ಗಳನ್ನು ಅರಣ್ಯ ಇಲಾಖೆ ಇರಿಸಿದೆ. ಇದಲ್ಲದೆ ಕೆಲ ಟ್ರ‍್ಯಾಪ್ ಕ್ಯಾಮೆರಾವನ್ನು ಸಹ ಅಳವಡಿಸಿದ್ದಾರೆ. ಆದರೆ ಇದರಿಂದ ಯಾವುದೇ ಪ್ರಯೋಜವಾಗುತ್ತಿಲ್ಲ. ಕೂಂಬಿಂಗ್ ಮಾಡಿ ಚಿರತೆ ಕಾರ್ಯಾಚರಣೆ ಮಾಡಬೇಕಾದ ಅರಣ್ಯ ಇಲಾಖೆ ಸಿಬ್ಬಂದಿ ಕಾಟಾಚಾರಕ್ಕೆ ಆಗೊಮ್ಮೆ ಈಗೊಮ್ಮೆ ಬಂದು ಹೋಗುತ್ತಾ ಇದ್ದಾರೆ.

ಒಂದು ಕಡೆ ಚಿರತೆಯ ಆತಂಕದಲ್ಲಿ ಬೃಂದಾವನವನ್ನು 15 ದಿನಗಳಿಂದ ಬಂದ್ ಮಾಡಲಾಗಿದ್ದು, ಇತ್ತ ಅರಣ್ಯ ಇಲಾಖೆಯ ಅಧಿಕಾರಿಗಳು ನಾವು ಚಿರತೆ ಹಿಡಿಯುತ್ತಿದ್ದೇವೆ, ಆದರೆ ಚಿರತೆ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ ಪ್ರತಿ ದಿನ ಸಿಸಿ ಕ್ಯಾಮೆರಾದಲ್ಲಿ ಚಿರತೆಯ ಚಲನವಲನಗಳು ಸೆರೆಯಾಗುತ್ತಿದೆ. ನಿನ್ನೆಯೂ ಸಹ ಉತ್ತರ ಬೃಂದಾವನದ ವ್ಯಾಪ್ತಿಯಲ್ಲಿ ಮುಳ್ಳು ಹಂದಿಯ ಜೊತೆ ಚಿರತೆ ಸೆಣೆಸಾಡುವ ದೃಶ್ಯ ಕಾಣಿಸಿಕೊಂಡಿದೆ. ಆದರೆ ಕಾಟಾಚಾರದ ಅಧಿಕಾರಿಗಳಿಗೆ ಮಾತ್ರ ಚಿರತೆ ಕಾಣಿಸುತ್ತಿಲ್ಲ. ದೊಡ್ಡದಾದ 8 ಬೋನ್ ಇಟ್ಟಿದ್ದೇವೆ ಎನ್ನುತ್ತಿದ್ದಾರೆ. ಇದನ್ನೂ ಓದಿ: ಮತದಾರರ ಮಾಹಿತಿ ಕಳವು ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್- ಪೊಲೀಸರ ಮುಂದೆ ನಾಲ್ವರು ತಪ್ಪೊಪ್ಪಿಗೆ

ಬೋನ್ ಇಟ್ಟರೆ ಮಾತ್ರ ಚಿರತೆ ಬೀಳುವುದಿಲ್ಲ. ಸರಿಯಾದ ರೀತಿಯ ಕೂಂಬಿಂಗ್ ಮಾಡಿದರೆ ಮಾತ್ರ ಚಿರತೆ ಸೆರೆಯಾಗುವುದು. ಬೋನ್ ಇಟ್ಟು ಕೂಂಬಿಂಗ್‌ಗೆ ಇವರು ಬಂದಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಇಷ್ಟಾದರೂ ಸಹ ಸಚಿವರು ಆಗಲಿ, ಜಿಲ್ಲಾಧಿಕಾರಿಯಾಗಲಿ ಇತ್ತ ತಲೆಹಾಕಿಲ್ಲ.
ಕಳೆದ 15 ದಿನಗಳಿಂದ ಬೃಂದಾವನ ಬಂದ್ ಆಗಿರುವ ಕಾರಣ ಇದನ್ನೇ ಜೀವನ ನಿರ್ವಹಣೆಗೆ ಆಧಾರವನ್ನಾಗಿ ಮಾಡಿಕೊಂಡಿರುವ ವ್ಯಾಪಾರಸ್ಥರ ಸ್ಥಿತಿ ಚಿಂತಾಜನಕವಾಗಿದೆ. ಪ್ರವಾಸಿಗರನ್ನೇ ನಂಬಿಕೊಂಡಿದ್ದ ವ್ಯಾಪಾರಸ್ಥರು ಇದೀಗ ವ್ಯಾಪಾರವಿಲ್ಲದೇ ಕುಟುಂಬ ನಿರ್ವಹಣೆಗೂ ಕಷ್ಟಪಡುವ ಸ್ಥಿತಿಗೆ ಬಂದಿದ್ದಾರೆ. ಇವರು ಚಿರತೆ ಇದೆ ಅಂತಾರೆ ಆದರೆ ಚಿರತೆ ಹಿಡಿಯೋಕೆ ಮಾತ್ರ ಬರ್ತಾ ಇಲ್ಲ. ನಮ್ಮ ಕಷ್ಟ ಕೇಳೋರು ಯಾರು ಸ್ವಾಮಿ ಎಂದು ವ್ಯಾಪಾರಸ್ಥರು ಕಣ್ಣೀರು ಹಾಕುತ್ತಿದ್ದಾರೆ.

ಒಟ್ಟಾರೆ ಬೃಂದಾವನಲ್ಲಿ ಚಿರತೆಯ ಕಣ್ಣಾಮುಚ್ಚಾಲೆಯಿಂದ ಪ್ರವಾಸಿಗರಿಗೆ ನೀರಾಸೆಯಾದರೆ, ಇದನ್ನೇ ನಂಬಿಕೊಂಡಿರುವ ವ್ಯಾಪಾರಸ್ಥರು ಕಷ್ಟಪಡುವಂತಾಗಿದೆ. ಈಗಲಾದರೂ ಅರಣ್ಯ ಇಲಾಖೆಯ ಅಧಿಕಾರಿಗಳು ತನ್ನ ಬೇಜವಾಬ್ದಾರಿತನ ಬಿಟ್ಟು ಚಿರತೆ ಸೆರೆಗೆ ಸರಿಯಾಗಿ ಕಾರ್ಯಾಚರಣೆ ಮಾಡಬೇಕಿದೆ. ಇದನ್ನೂ ಓದಿ: ಪಾಕ್ ಪರ ಘೋಷಣೆ ಕೂಗಿದ್ದ ಮೂವರು ವಿದ್ಯಾರ್ಥಿಗಳು ರಿಲೀಸ್

Leave a Reply