ಕಬ್ಬಿನ ಗದ್ದೆಯಲ್ಲಿ ಸಿಕ್ಕ ಚಿರತೆ ಮರಿ- ಮುದ್ದಾಡಿದ ಗ್ರಾಮಸ್ಥರು

ಮೈಸೂರು: ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಕಬ್ಬಿನ ಗದ್ದೆಯಲ್ಲಿ ಚಿರತೆ ಮರಿಯೊಂದು ಪ್ರತ್ಯಕ್ಷವಾಗಿದೆ. ಕಬ್ಬಿನ ಗದ್ದೆಯಲ್ಲಿ ಸಿಕ್ಕಿದ ಮುದ್ದು ಮುದ್ದಾದ ಚಿರತೆ ಮರಿಯನ್ನು ಗ್ರಾಮಸ್ಥರು ಎತ್ತಿ ಮುದ್ದಾಡಿದ್ದಾರೆ.

ಕೆ.ಆರ್.ನಗರ ತಾಲೂಕಿನ ಮಿರ್ಲೆ ಗ್ರಾಮದ ಜಮೀನಿನಲ್ಲಿ ಕಬ್ಬು ಕಟಾವು ವೇಳೆ ಚಿರತೆ ಮರಿ ಸಿಕ್ಕಿದೆ. ಒಂದು ತಿಂಗಳ ಗಂಡು ಮರಿ ಇದ್ದಾಗಿದ್ದು, ಸಂತೋಷ್ ಎಂಬವರು ತಮ್ಮ ಕಬ್ಬಿನ ಗದ್ದೆಯಲ್ಲಿ ಕಟಾವು ಮಾಡುವಾಗ ಈ ಮರಿಯನ್ನು ನೋಡಿದ್ದಾರೆ. ತಕ್ಷಣ ಮರಿಯನ್ನು ತೆಗೆದುಕೊಂಡು ಗ್ರಾಮಕ್ಕೆ ಬಂದಿದ್ದಾರೆ. ಗ್ರಾಮದಲ್ಲಿ ಚಿರತೆ ಮರಿಯನ್ನು ನೋಡಲು ಬಂದವರೆಲ್ಲಾ ಅದನ್ನು ಕೈಯಲ್ಲಿ ಎತ್ತಿಕೊಂಡು ಮುದ್ದಾಡಿದ್ದಾರೆ.

ಸಂತೋಷ್ ಅರಣ್ಯ ಇಲಾಖೆಗೆ ಫೋನ್ ಮಾಡಿ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಮರಿಯನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.

ತಾಯಿ ಚಿರತೆ ಕಬ್ಬಿನ ಗದ್ದೆಯೊಳಗೆ ಮರಿ ಹಾಕಿ ಮರಿಗಳನ್ನು ಕಾಡಿಗೆ ತೆಗೆದುಕೊಂಡು ಭರದಲ್ಲಿ ಈ ಮರಿಯನ್ನು ಇಲ್ಲೆ ಬಿಟ್ಟು ಹೋಗಿರುವ ಸಾಧ್ಯತೆ ಇದೆ. ಅಥವಾ ಮರಿಯನ್ನು ಇಲ್ಲೆ ಬಿಟ್ಟು ಬೇರೆಡೆಗೆ ಬೇಟೆಗೆ ತೆರಳಿರೋ ಸಾಧ್ಯತೆಯೂ ಇದೆ.

Comments

Leave a Reply

Your email address will not be published. Required fields are marked *