ಕೊನೆಗೂ ಮಾರಾಟವಾಯ್ತು ಗೋವಾದಲ್ಲಿನ ವಿಜಯ್ ಮಲ್ಯ ಮನೆ

ನವದೆಹಲಿ: ಸತತ ಪ್ರಯತ್ನದ ಬಳಿಕ ಕೊನೆಗೂ ಎಸ್‍ಬಿಐ ನೇತೃತ್ವದ ಸಾಲದಾತರ ಸಮೂಹ ಗೋವಾದಲ್ಲಿನ ವಿಜಯ್ ಮಲ್ಯ ಮನೆ ಕಿಂಗ್‍ಫಿಶರ್ ವಿಲ್ಲಾ ವನ್ನ ಮಾರಾಟ ಮಾಡಿದ್ದಾರೆ.

ಈ ಹಿಂದೆ ಕಿಂಗ್‍ಫಿಶರ್ ವಿಲ್ಲಾದ ಹರಾಜು ಪ್ರಕ್ರಿಯೆ 3 ಬಾರಿ ವಿಫಲವಾಗಿತ್ತು. ಇದೀಗ ಚಿತ್ರ ನಿರ್ಮಾಣ ಸಂಸ್ಥೆಯಾದ ವೈಕಿಂಗ್ ಮೀಡಿಯಾ ಅಂಡ್ ಎಂಟರ್‍ಟೈನ್‍ಮೆಂಟ್, ಖಾಸಗಿ ಒಪ್ಪಂದದ ಮೇಲೆ 73.01 ಕೋಟಿ ರೂಪಾಯಿಗೆ ಮನೆಯನ್ನ ಖರೀದಿಸಿದೆ. ನಟ ಹಾಗೂ ನಿರ್ಮಾಪಕರಾದ ಸಚಿನ್ ಜೋಶಿ, ವೈಕಿಂಗ್ ಮೀಡಿಯಾದ ಮಾಲೀಕರಾಗಿದ್ದಾರೆ. ಸಚಿನ್ ಗೋವಾದಲ್ಲಿ ಬೀರ್ ಬ್ರ್ಯಾಂಡ್‍ವೊಂದನ್ನು ಸಹ ಹೊಂದಿದ್ದಾರೆ.

ಕಿಂಗ್‍ಫಿಶರ್ ವಿಲ್ಲಾ ವಿಜಯ್ ಮಲ್ಯ ಮಾಲೀಕತ್ವದಲ್ಲಿದ್ದಾಗ ಐಷಾರಾಮಿ ಪಾರ್ಟಿಗಳನ್ನ ಆಯೋಜಿಸಿದ್ದರಿಂದ ಈ ಮನೆ ತುಂಬಾ ಫೇಮಸ್ ಆಗಿತ್ತು.

2016ರ ಅಕ್ಟೋಬರ್‍ನಲ್ಲಿ ಮೊದಲ ಬಾರಿಗೆ ಕಿಂಗ್‍ಫಿಶರ್ ವಿಲ್ಲಾವನ್ನ 85.29 ರೂ.ಗಳ ಕನಿಷ್ಠ ಬೆಲೆಗೆ ಹರಾಜಿಗಿಡಲಾಗಿತ್ತು. ಆದ್ರೆ ಮನೆ ಕೊಳ್ಳಲು ಯಾರೂ ಮುಂದೆ ಬರದ ಕಾರಣ ಡಿಸೆಂಬರ್‍ನಲ್ಲಿ ಬೆಲೆ ಕಡಿಮೆ ಮಾಡಿ 81 ಕೋಟಿ ರೂ. ಕನಿಷ್ಠ ಬೆಲೆಗೆ ಮತ್ತೆ ಹರಾಜಿಗಿಡಲಾಗಿತ್ತು. ಇದೂ ವಿಫಲವಾಗಿ ಬಳಿಕ 2017ರ ಮಾರ್ಚ್‍ನಲ್ಲಿ 73 ಕೋಟಿ ರೂ.ಗೆ ಮನೆಯನ್ನು ಹರಾಜಿಗಿಡಲಾಗಿತ್ತು. ಇದೀಗ ಕನಿಷ್ಠ ಬೆಲೆಗಿಂತ 1 ಲಕ್ಷ ರೂ. ಹೆಚ್ಚಿನ ಹಣ ಕೊಟ್ಟು  ಖಾಸಗಿ ಒಪ್ಪಂದದ ಮೇಲೆ ವೈಕಿಂಗ್ ಮೀಡಿಯಾ ಮನೆಯನ್ನ ಖರೀದಿಸಿದೆ.

17 ಸಾಲದಾತರ ಒಕ್ಕೂಟ ವಿಜಯ್ ಮಲ್ಯರ 9 ಸಾವಿರ ಕೋಟಿ ರೂ. ನಷ್ಟು ಸಾಲವನ್ನು ಹಿಂಪಡೆಯಲು ಪಯತ್ನ ನಡೆಸಿವೆ. ಮಲ್ಯಗೆ ಸೇರಿದ ಮುಂಬೈನಲ್ಲಿರುವ ಮತ್ತೊಂದು ಮನೆ ಕಿಂಗ್‍ಫಿಶರ್ ಹೌಸ್ ಕೂಡ ಹರಾಜಿಗಿಡಲಾಗಿದೆ.

Comments

Leave a Reply

Your email address will not be published. Required fields are marked *