ವೈರಲ್ ವಿಡಿಯೋ ನೋಡಿ ರೈಲು ನಿಲ್ದಾಣದಲ್ಲಿ ಬ್ಯಾನ್ ಆಯ್ತು ನಿಂಬೆ ಜ್ಯೂಸ್!

ಮುಂಬೈ: ಕಲುಷಿತ ನೀರನ್ನು ಬಳಿಸಿ ತಯಾರಾಗುತ್ತಿದ್ದ ನಿಂಬೆ ಹಣ್ಣಿನ ಜ್ಯೂಸ್ ಹಾಗೂ ಇತರೇ ಪಾನೀಯಗಳ ವಿಡಿಯೋ ವೈರಲ್ ಆದ ಬಳಿಕ, ಎಚ್ಚೆತ್ತುಕೊಂಡ ಕೇಂದ್ರ ರೈಲ್ವೇ ಇಲಾಖೆ ಮುಂಬೈ ರೈಲು ನಿಲ್ದಾಣದಲ್ಲಿ ಇನ್ಮುಂದೆ ಈ ರೀತಿ ಪಾನೀಯಗಳನ್ನು ಮಾರುವಂತಿಲ್ಲಾ ಎಂದು ಆದೇಶ ಹೊರಡಿಸಿದೆ.

ಮುಂಬೈನ ಕುರ್ಲಾ ರೈಲು ನಿಲ್ದಾಣದಲ್ಲಿ ಸೋಮವಾರದಂದು ವ್ಯಾಪಾರಿಯೊಬ್ಬ ಕಲುಷಿತ ಟ್ಯಾಂಕ್‍ನ ನೀರು ಬಳಸಿ, ಅದಕ್ಕೆ ನಿಂಬೆ ಹಣ್ಣಿನ ರಸ ಸೇರಿಸಿ ಬರಿಗೈನಿಂದ ಅದನ್ನು ಕಲಸಿ ಜ್ಯೂಸ್ ಮಾಡಿ, ಬಳಿಕ ಅದನ್ನೇ ಪ್ರಯಾಣಿಕರಿಗೆ ಮಾರಾಟ ಮಾಡುತ್ತಿದ್ದ ವಿಡಿಯೋವನ್ನು ಕೆಲವರು ಮೊಬೈಲ್‍ನಲ್ಲಿ ಸೆರೆಹಿಡಿದು, ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಸದ್ಯ ಈ ವಿಡಿಯೋ ಎಲ್ಲಡೆ ಸಖತ್ ವೈರಲ್ ಆಗಿದ್ದು, ವಿಡಿಯೋ ಬೆಳಕಿಗೆ ಬರುತ್ತಿದ್ದಂತೆ ಎಚ್ಚೆತ್ತುಕೊಂಡ ರೈಲ್ವೇ ಇಲಾಖೆ ನಿಲ್ದಾಣದಲ್ಲಿ ಶೇಖರಿಸಿಟ್ಟಿದ್ದ ಹಣ್ಣಿನ ರಸ ಬಳಸಿ ತಯಾರಾಗುವ ತಂಪು ಪಾನೀಯಗಳನ್ನು ನಿಷೇಧಿಸಿದೆ.

ಸದ್ಯ ರೈಲು ನಿಲ್ದಾಣದಲ್ಲಿ ಶೇಖರಿಸಿಟ್ಟಿದ್ದ ಹಣ್ಣಿನ ರಸ ಬಳಸಿ ತಯಾರಾಗುವ ಜ್ಯೂಸ್‍ಗಳ ಮೇಲೆ ಮಾತ್ರ ನಿಷೇಧ ಹೇರಲಾಗಿದೆ. ಆದ್ರೆ ರೈಲ್ವೇ ನಿಲ್ದಾಣದಲ್ಲಿ ತಾಜಾ ಹಣ್ಣುಗಳ ಜ್ಯೂಸ್ ತಯಾರಕರು ತಮ್ಮ ವ್ಯಾಪಾರವನ್ನು ಮುಂದುವರಿಸುವಂತೆ ಸೂಚಿಸಿದೆ. ಹಾಗೆಯೇ ಪ್ರಯಾಣಿಕರಿಗೆ ಸ್ವಚ್ಛ ಹಾಗೂ ಶುಚಿಯಾದ ಸೇವೆ ನೀಡದಿದ್ದಲ್ಲಿ, ತಾಜಾ ಜ್ಯೂಸ್ ವ್ಯಾಪಾರಿಗಳ ಮೇಲೆ ಕೂಡ ಕ್ರಮ ಕೈಗೊಳ್ಳಲಾಗುತ್ತದೆ ಎಂದು ರೈಲ್ವೇ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಸದ್ಯ ವಿಡಿಯೋದಲ್ಲಿ ಸೆರೆಯಾಗಿರುವ ಜ್ಯೂಸ್ ಅಂಗಡಿ ಮಾಲೀಕನ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸ್ ಠಾಣೆಗೆ ವಿಚಾರಣೆಗೆ ಬರುವಂತೆ ಸೂಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

https://www.youtube.com/watch?time_continue=1&v=_KLr80FgBCQ

Comments

Leave a Reply

Your email address will not be published. Required fields are marked *