ಮಕ್ಕಳು ಸೇರಿ 4,000 ಬಡ ಜನರಿಗೆ ಆರ್ಥಿಕ ನೆರವು ನೀಡಿದ ಕ್ರಿಕೆಟ್ ದೇವರು

ಮುಂಬೈ: ಕ್ರಿಕೆಟ್ ದೇವರು, ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ಬೃಹತ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್(ಬಿಎಂಸಿ) ಮಕ್ಕಳು ಸೇರಿದಂತೆ 4,000 ಬಡ ಜನರಿಗೆ ಆರ್ಥಿಕ ನೆರವು ನೀಡಿದ್ದಾರೆ.

ಲಿಟಲ್ ಮಾಸ್ಟರ್ ತೆಂಡೂಲ್ಕರ್ ಅವರು ಮುಂಬೈ ಮೂಲದ ಲಾಭರಹಿತ ಸಂಸ್ಥೆಯಾದ ಹೈ5 ಯೂತ್ ಫೌಂಡೇಶನ್‍ಗೆ ದೇಣಿಗೆ ನೀಡಿದ್ದಾರೆ. ಆದರೆ ಎಷ್ಟು ಹಣ ನೀಡಿದ್ದಾರೆ ಎಂದು ಅವರಾಗಲಿ ಅಥವಾ ಫೌಂಡೇಶನ್ ಆಗಲಿ ಮಾಹಿತಿ ನೀಡಿಲ್ಲ.

“ಕ್ರೀಡೆ ಸಹಾನುಭೂತಿಯನ್ನು ಉತ್ತೇಜಿಸುತ್ತದೆ ಎಂದು ಮತ್ತೊಮ್ಮೆ ಸಾಬೀತುಪಡಿಸಿದ್ದಿರಿ. ನಿಮಗೆ ಧನ್ಯವಾದಗಳು ಸಚಿನ್ ತೆಂಡೂಲ್ಕರ್. ನಮ್ಮ ಕೋವಿಡ್-19 ನಿಧಿಗೆ ನೀವು ನೀಡಿದ ಉದಾರ ಕೊಡುಗೆ ಬಿಎಂಸಿ ಶಾಲೆಗಳ ಮಕ್ಕಳು ಸೇರಿದಂತೆ 4,000 ಬಡವರ ಜನರಿಗೆ ಆರ್ಥಿಕವಾಗಿ ಸಹಾಯ ಮಾಡಲು ನಮಗೆ ಸಹಾಯವಾಗುತ್ತದೆ. ನಮ್ಮ ಉದಯೋನ್ಮುಖ ಕ್ರೀಡಾಪಟುಗಳಿಂದ ನಿಮಗೆ ಧನ್ಯವಾದಗಳು, ಲಿಟಲ್ ಮಾಸ್ಟರ್!” ಎಂದು ಹೈ5 ಯೂತ್ ಫೌಂಡೇಶನ್, ಸಚಿನ್ ಅವರಿಗೆ ಕೃತಜ್ಞತೆ ಸಲ್ಲಿಸಿ ಟ್ವೀಟ್ ಮಾಡಿದೆ.

47ರ ಹರೆಯದ ಸಚಿನ್ ಸಂಸ್ಥೆಗೆ ಉತ್ತರಿಸಿ, “ದಿನಗೂಲಿ ಪಡೆಯುವವರ ಕುಟುಂಬಗಳನ್ನು ಬೆಂಬಲಿಸುವಲ್ಲಿ ನಿಮ್ಮ ಪ್ರಯತ್ನಕ್ಕಾಗಿ ಹೈ5 ತಂಡಕ್ಕೆ ಶುಭಾಶಯಗಳು” ಎಂದು ತಿಳಿಸಿದ್ದಾರೆ. ಭಾರತದ ಮಾಜಿ ಬ್ಯಾಟ್ಸ್‌ಮನ್‌ ಸಚಿನ್ ಅವರು ಏಪ್ರಿಲ್‍ನಲ್ಲಿ ಅಪ್ನಾಲಯ ಎಂಬ ಎನ್‍ಜಿಒ ಮೂಲಕ ಮುಂಬೈನ ಶಿವಾಜಿ ನಗರ ಮತ್ತು ಗೋವಂಡಿ ಪ್ರದೇಶದಲ್ಲಿ ಸುಮಾರು 5,000 ಜನರಿಗೆ ಒಂದು ತಿಂಗಳು ದಿನಸಿ ನೀಡುವ ಭರವಸೆ ನೀಡಿದ್ದರು.

ಇದಕ್ಕೂ ಮುನ್ನ ಲಿಟಲ್ ಮಾಸ್ಟರ್ ಕೋವಿಡ್-19 ವಿರುದ್ಧದ ಹೋರಾಟಕ್ಕೆ ಪಿಎಂ-ಕೇರ್ಸ್ ಫಂಡ್ ಮತ್ತು ಮಹಾರಾಷ್ಟ್ರದ ಸಿಎಂ ರಿಲೀಫ್ ಫಂಡ್‍ಗೆ ತಲಾ 25 ಲಕ್ಷ ರೂ. ನೀಡಿದ್ದರು. ಹೆಮ್ಮಾರಿ ಕೊರೊನಾ ವೈರಸ್ ದೇಶದಲ್ಲಿ ಇದುವರೆಗೆ 1,900ಕ್ಕೂ ಜನರನ್ನು ಬಲಿ ಪಡೆದಿದೆ.

Comments

Leave a Reply

Your email address will not be published. Required fields are marked *