ಬೆಂಗಳೂರು| ಬ್ಯಾಂಕ್ ಸಾಲ ಇದ್ದ ಕಟ್ಟಡವನ್ನ ಲೀಸ್‌ಗೆ ಪಡೆದು ಸಂಕಷ್ಟಕ್ಕೆ ಸಿಲುಕಿದ 17 ಕುಟುಂಬಗಳು

– ಲಕ್ಷ ಲಕ್ಷ ಕೊಟ್ರೂ ಮನೆ ಕಳೆದುಕೊಳ್ಳಬೇಕಾದ ಆತಂಕ

ಬೆಂಗಳೂರು: ಬ್ಯಾಂಕ್‌ ಸಾಲ ಇದ್ದ ಕಟ್ಟವನ್ನು ಲೀಸ್‌ಗೆ ಪಡೆದು 17 ಕುಟುಂಬಗಳು ಬೀದಿಗೆ ಬಂದಿರುವ ಘಟನೆ ಬೆಂಗಳೂರಿನ ಚಂದ್ರಲೇಔಟ್‌ನಲ್ಲಿ ನಡೆದಿದೆ.

ಚಂದ್ರಲೇಔಟ್‌ನ ಗಂಗೊಂಡನಹಳ್ಳಿಯಲ್ಲಿ ಕಳೆದ ಆರೇಳು ವರ್ಷದ ಹಿಂದೆ ಸುಧಾ ಎಂಬಾಕೆ ಕೋ ಆಪರೇಟಿವ್ ಬ್ಯಾಂಕ್‌ನಲ್ಲಿ ಎರಡೂ ಕೋಟಿ ರೂ.ವರೆಗೆ ಸಾಲ ಪಡೆದು ಕಟ್ಟಡ ನಿರ್ಮಾಣ ಮಾಡಿದ್ದರು. ಕಟ್ಟಡದಲ್ಲಿ ಒಟ್ಟು 17 ಮನೆಗಳಿದ್ದು, ಎಲ್ಲಾವನ್ನು ಲೀಸ್‌ಗೆ ನೀಡಿದ್ದರು. ಕಟ್ಟಡದ ಮೇಲೆ ಸಾಲ ಇರುವ ವಿಚಾರ ಗೊತ್ತಿಲ್ಲದೇ 17 ಕುಟಂಬಗಳು, ಲಕ್ಷ ಲಕ್ಷ ಹಣ ನೀಡಿ ಮನೆಗಳನ್ನ ಲೀಸ್‌ಗೆ ಹಾಕಿಕೊಂಡು ಸಂಕಷ್ಟಕ್ಕೆ ಸಿಲುಕಿವೆ. ಇದನ್ನೂ ಓದಿ: ಸರ್ಕಾರಿ ನೌಕರರಿಗೆ ಪ್ರತಿಭಟನೆ ಮಾಡುವ ಅವಕಾಶ ಇಲ್ಲ: ಮಧು ಬಂಗಾರಪ್ಪ

ಮಾಲಕಿ ಕಳೆದ ಹಲವು ತಿಂಗಳಿನಿಂದ ಸಾಲ ಮರುಪಾವತಿ ಮಾಡದ ಕಾರಣ ಬ್ಯಾಂಕ್‌ನವರು ಕಟ್ಟಡ ಸೀಸ್‌ಗೆ ಮುಂದಾಗಿದ್ದಾರೆ. ಮೂರು ಬಾರಿ ಮಾಲಕಿಗೆ ‌ನೋಟಿಸ್‌ ಕೊಟ್ಟರು. ಸಾಲ ಮರುಪಾವತಿ ಮಾಡದ ಕಾರಣ ಬ್ಯಾಂಕ್ ಸಿಬ್ಬಂದಿ ಸೀಜ್‌ಗೆ ಮುಂದಾಗಿದ್ದಾರೆ. ಈ ವೇಳೆ ಮನೆಯಲ್ಲಿದ್ದವರು ವಿರೋಧ ವ್ಯಕ್ತಪಡಿಸಿದರು. ಒಪ್ಪದ ಸಿಬ್ಬಂದಿ ಮನೆಗಳಿಗೆ ಬೀಗ ಹಾಕಲು ಮುಂದಾಗಿದ್ದಾರೆ.

ಬ್ಯಾಂಕ್ ಸಿಬ್ಬಂದಿಗೆ ಹೆದರಿ ಹಲವರು ಮನೆಗಳ ಒಳಗಿಂದ ಲಾಕ್ ಮಾಡಿಕೊಂಡು ಮನೆಯಿಂದ ಆಚೆ ಬಾರದೇ ಹೆದರಿದ್ದರು. ಈ ಬಗ್ಗೆ ಕಟ್ಟಡದ ಮಾಲೀಕರಿಗೆ ಮಾಹಿತಿ ನೀಡಿದರು. ಮಾಲಕಿ ಮಾತ್ರ ಸಬೂಬು ನೀಡಿ ಜಾರಿಕೊಳ್ಳುತ್ತಿದ್ದಾರಂತೆ.‌ ಇದನ್ನೂ ಓದಿ: ಭುಗಿಲೆದ್ದ ರೈತರ ಆಕ್ರೋಶ – ಹೇಮಾವತಿ ಲಿಂಕ್ ಕೆನಾಲ್ ಯೋಜನೆ ಕಾಮಗಾರಿ ತಾತ್ಕಾಲಿಕ ಸ್ಥಗಿತ

ಇಡೀ ಕಟ್ಟಡದ ಪ್ರತಿ ಮನೆಯೂ 10 ರಿಂದ 30 ಲಕ್ಷಗಳ ವರೆಗೆ ಹಣ ನೀಡಿದ್ದಾರೆ. ಅತ್ತ ಬ್ಯಾಂಕ್‌ನವರು ನಿವಾಸಿಗಳಿಗೆ ಎರಡು ದಿನ ಸಮಯಾವಕಾಶ ನೀಡಿ ಹೋಗಿದ್ದು, ಎರಡು ದಿನದಲ್ಲಿ ಮನೆ ಖಾಲಿ ಮಾಡುವಂತೆ ಗಡುವು ನೀಡಿದ್ದಾರೆ. ಸದ್ಯ ಬ್ಯಾಂಕ್ ಸಿಬ್ಬಂದಿ ಗಡುವಿನಿಂದ ಆತಂಕಕ್ಕೆ ಒಳಗಾಗಿರುವ ನಿವಾಸಿಗಳು, ವಾಪಸ್ ಹಣವು ಸಿಗದೇ, ಮನೆಯೂ ಇಲ್ಲದಂತಾದರೆ ಏನು ಮಾಡುವುದು ಎಂದು ಅತಂತ್ರ ಸ್ಥಿತಿಯಲ್ಲಿದ್ದಾರೆ.