BJP, RSS ಕರ್ನಾಟಕದ ಜನ ತಲೆತಗ್ಗಿಸುವಂತಹ ಕೆಲಸ ಮಾಡ್ತಿದೆ: ಬಿ.ಕೆ ಹರಿಪ್ರಸಾದ್

ಬೆಳಗಾವಿ: ಬಿಜೆಪಿ (BJP), ಆರ್‍ಎಸ್‍ಎಸ್‍ (RSS) ನವರು ಕರ್ನಾಟಕದ ಜನ ತಲೆತಗ್ಗಿಸುವಂತಹ ಕೆಲಸ ಮಾಡ್ತಿದ್ದು, ಹಿಂದುಳಿದವರಿಗೆ ಮೀಸಲಾತಿ ರದ್ದುಪಡಿಸುವ ಹುನ್ನಾರ ಮಾಡಲಾಗುತ್ತಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ (B.K Hariprasad) ಹೇಳಿದರು.

ನಗರದಲ್ಲಿ ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮದಗೋಷ್ಠಿಯಲ್ಲಿ ಮಾತನಾಡಿದ ಅವರು, ಕಿತ್ತೂರು ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಬೆಳವಡಿ ಮಲ್ಲಮ್ಮ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದಾರೆ. ರಾಷ್ಟ್ರವನ್ನು ಸ್ಥಾಪನೆ ಮಾಡಿದವರಿಗೂ ಅಪಮಾನ ಮಾಡುವಂತ ಘಟನೆ ನಡೀತಿದೆ. ಸ್ವಾತಂತ್ರ್ಯ ಹೋರಾಟ ಕೇವಲ ಒಂದು ಜಾತಿ, ಭಾಷೆ, ಪ್ರಾಂತ್ಯದ ವಿಚಾರ ಆಗಿರಲಿಲ್ಲ. ಲಕ್ಷಾಂತರ ಜನ ತ್ಯಾಗ ಬಲಿದಾನ ಮಾಡಿ ಸ್ವಾತಂತ್ರ್ಯ ಪಡೆದಿರುವಂತಹದ್ದು. ಸಂವಿಧಾನ ವಿರುದ್ಧ ಬಿಜೆಪಿ, ಮಂತ್ರಿಗಳು ಹಾಗೂ ಸಂಘಪರಿವಾರ ಸದಸ್ಯರು ಷಡ್ಯಂತ್ರ ಮಾಡೋದನ್ನ ನೋಡ್ತಿದ್ದೇವೆ ಎಂದರು.

ದೇಶದಲ್ಲಿ ಮೊಟ್ಟಮೊದಲಿನ ಸ್ವಾತಂತ್ರ್ಯ ಹೋರಾಟದ ನಾಯಕತ್ವವನ್ನು ಬಹದೂರ್ ಎಸ್ ಜಾಫರ್’ ವಹಿಸಿದ್ದರು. ಇದನ್ನು ಯಾರೂ ಸಹ ಮರೆಯಕ್ಕಾಗೋದಿಲ್ಲ. ತದನಂತರ 1857ರಲ್ಲಿ ಝಾನ್ಸಿ ರಾಣಿ ಯಾವುದೇ ಧರ್ಮ, ಜಾತಿ, ಭಾಷೆ, ಪ್ರಾಂತ್ಯ ಲೆಕ್ಕಿಸದೇ ಸ್ವಾತಂತ್ರ್ಯ ಹೋರಾಟ ಮಾಡಿದ್ರು. ಏನೂ ನಿರೀಕ್ಷೆ ಇಲ್ಲದೇ ಈ ಭಾರತ ದೇಶವನ್ನ ನಮ್ಮ ಕೈಗೆ ಕೊಟ್ಟಿದ್ದಾರೆ. ಭಾರತ ದೇಶ ಉಳಿಸುವ ಕೆಲಸ ನಾವೆಲ್ಲ ಮಾಡಬೇಕಿದೆ. ಏನಾದರೂ ಒಳ್ಳೆಯ ಕೆಲಸ ಮಾಡೋಣ. ಮುಂದಿನ ಪೀಳಿಗೆಗೆ ಈ ಭಾರತ ದೇಶ ಸಂವಿಧಾನ ಕೊಟ್ಟು ಹೋಗಬೇಕು ಎಂದರು. ಇದನ್ನೂ ಓದಿ: ಬೆಳಗಾವಿಯಲ್ಲಿಯೂ ಬೇರೆ ದೇಶದ ನೋಟುಗಳು, ಶಸ್ತ್ರಾಸ್ತ್ರಗಳು ಸಿಗುತ್ತವೆ: ಅಭಯ್ ಪಾಟೀಲ್ ಸ್ಫೋಟಕ ಹೇಳಿಕೆ

ಧಾರವಾಡ, ರಾಯಚೂರು, ಕೋಲಾರದಲ್ಲಿ ಅಲ್ಪಸಂಖ್ಯಾತರ ಮೇಲೆ ಹಲ್ಲೆ. ಇದು ದೊಡ್ಡ ಷಡ್ಯಂತ್ರ ಮಾಡ್ತಿದ್ದಾರೆ. ಮೊದಲು ದಲಿತರ ಮೇಲೆ, ಮಹಿಳೆಯರ ಮೇಲೆ ದೌರ್ಜನ್ಯ ಮಾಡಲಾಗಿತ್ತು. ಬಳಿಕ ಹಿಂದುಳಿದ ವರ್ಗದವರ ಮೇಲೆ ದೌರ್ಜನ್ಯ ಮಾಡುತ್ತಿದೆ. ಸದ್ಯ ಮೀಸಲಾತಿ ರದ್ದು ಮಾಡಿ ಅವಕಾಶ ತಪ್ಪಿಸುವಂತಹ ಕೆಲಸ ನಡೀತಿದೆ. ಈಗ ಅಲ್ಪಸಂಖ್ಯಾತರ ಮೇಲೆ ನೇರವಾಗಿ ದೌರ್ಜನ್ಯ ಮಾಡುತ್ತಿದೆ. ಬಹುಸಂಖ್ಯಾತರ ಭಾವನೆ ಕೆರಳಿಸಿ ಕೆಲವು ಸಮುದಾಯಗಳನ್ನು ಎರಡನೇ ದರ್ಜೆ ನಾಗರಿಕರನ್ನಾಗಿಸಲು ಪ್ರಯತ್ನ ಮಾಡುವ ಮೂಲಕ ಮನುಸ್ಮೃತಿ ಸಂವಿಧಾನ ಅಡಿಯಲ್ಲಿ ಪ್ರಬಲ ಜಾತಿ ಬಿಟ್ರೆ ಎಲ್ಲರೂ ಎರಡನೇ ದರ್ಜೆ ನಾಗರಿಕರು, ಅವರೆಲ್ಲ ಜೀತದಾಳರು, ಗುಲಾಮರು ಅನ್ನೋ ಭಾವನೆ ಮೂಡಿಸಲು ಬಿಜೆಪಿ, ಆರ್‍ಎಸ್‍ಎಸ್ ಪ್ರಯತ್ನ ಮಾಡುತ್ತಿದೆ.ಇದನ್ನ ನಾನು ಖಂಡಿಸುತ್ತೇನೆ ಎಂದು ಹೇಳಿದರು.

ದೇವಸ್ಥಾನದ ಹತ್ತಿರ ವ್ಯಾಪಾರ ಮಾಡಲು ಯಾರೂ ನಿರ್ಬಂಧ ಹೇರಕ್ಕಾಗಲ್ಲ. 2002ರಲ್ಲಿ ಕಾಂಗ್ರೆಸ್ ಪಕ್ಷ ಕಾನೂನು ತಂದಿದೆ ಅಂತಾ ಹೇಳಬಹುದು. ದೇವಾಲಯದ ಕಟ್ಟಡದಲ್ಲಿ ಅನ್ಯಧರ್ಮೀಯರು ಮಾತ್ರ ವ್ಯಾಪಾರ ಮಾಡಬಾರದು ಅಂತಾ ಇತ್ತು. ರಸ್ತೆಯಲ್ಲಿ ವ್ಯಾಪಾರ ಮಾಡಬಾರದು ಎಂದು ಹೇಳಿಲ್ಲ. ಬಿಜೆಪಿಗೆ ಅಷ್ಟೊಂದು ಕಳಕಳಿ ಇದ್ರೆ ಜಾತಿ ಹೆಸರಿನಲ್ಲಿ ಇರೋ ಹೋಟೆಲ್, ಮಾರ್ಕೆಟ್ ಮುಚ್ಚಲಿ ಎಂದು ಸವಾಲು ಹಾಕಿದರು. ಇದನ್ನೂ ಓದಿ: ದೇಶದ ವೈವಿಧ್ಯತೆಯನ್ನು ಗುರುತಿಸುವುದು ಸಂಘ ಪರಿವಾರದ ಅಜೆಂಡಾವಲ್ಲ : ಪಿಣರಾಯಿ

130 ಕೋಟಿ ಭಾರತೀಯರಿಗೆ ಸಮಾನವಾದ ಹಕ್ಕು ಇದೆ. ಸಮಾನವಾದ ಅವಕಾಶ ಇದೆ ಅದನ್ನ ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ದೇಶದಲ್ಲಿ ಬೆಲೆ ಏರಿಕೆ ನಿರಂತರವಾಗಿ ಹೆಚ್ಚಾಗಿದೆ. ದೇಶದಲ್ಲಿ ಶಾಂತಿ ಸುವ್ಯವಸ್ಥೆ ಕದಡಿದೆ.ರಾಷ್ಟ್ರದ ಗಡಿ ರಕ್ಷಣೆ ಮಾಡಲು ವಿಫಲರಾದ ಮೋದಿ ವೈಫಲ್ಯತೆ ಮುಚ್ಚಲು ಷಡ್ಯಂತ್ರ ಮಾಡಲಾಗುತ್ತಿದೆ. ಇದನ್ನು ಮರೆಮಾಚಲು ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡ್ತಿದ್ದಾರೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ ನಡೆಸಿದರು.

Comments

Leave a Reply

Your email address will not be published. Required fields are marked *