ಕಾಲ್ತುಳಿತಕ್ಕೆ ಪೊಲೀಸರ ಲಾಠಿಚಾರ್ಜ್‌ ಕಾರಣ: ಟಿವಿಕೆ ಆರೋಪ

ಕರೂರ್‌: ಪೊಲೀಸರು ಲಾಠಿಚಾರ್ಜ್‌ ಮಾಡಿದ್ದರಿಂದ 39 ಮಂದಿ ಮೃತಪಟ್ಟಿದ್ದಾರೆ ಎಂದು ವಿಜಯ್‌ (Vijay) ಅವರ ತಮಿಳಗ ವೆಟ್ರಿ ಕಳಗಂ (TVK) ಪಕ್ಷ ಆರೋಪಿಸಿದೆ.

ಪಕ್ಷ ಮೊದಲು ಕರೂರ್‌ನ ಲೈಟ್‌ಹೌಸ್ ಕಾರ್ನರ್ ಮತ್ತು ಉಜಾವರ್ ಮಾರುಕಟ್ಟೆಯ ಬಳಿ ರ‍್ಯಾಲಿ ನಡೆಸಲು ಟಿವಿಕೆ ಅನುಮತಿ ಕೋರಿತ್ತು. ಆದರೆ ಡಿಎಂಕೆ ಸರ್ಕಾರ ಸುರಕ್ಷತಾ ಕಾರಣಗಳಿಂದಾಗಿ ಈ ಜಾಗದಲ್ಲಿ ರ‍್ಯಾಲಿ ನಡೆಸಲು ಅನುಮತಿ ನೀಡಿರಲಿಲ್ಲ. ಬದಲಾಗಿ ಕರೂರ್-ಈರೋಡ್ ರಸ್ತೆಯಲ್ಲಿ ರ‍್ಯಾಲಿಗೆ ಅವಕಾಶ ನೀಡಲಾಯಿತು. ಆದರೆ ಈ ಜಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸದ ಕಾರಣ ದುರಂತ (TVK Rally Stampede) ಸಂಭವಿಸಿದೆ ಎಂದು ದೂರಿದೆ. ಇದನ್ನೂ ಓದಿ: ಕರೂರು ಕಾಲ್ತುಳಿತ ದುರಂತ ಮೃತರ ಕುಟುಂಬಕ್ಕೆ ತಲಾ 20 ಲಕ್ಷ ಪರಿಹಾರ ಘೋಷಿಸಿದ ವಿಜಯ್

 

ಪ್ರತ್ಯಕ್ಷದರ್ಶಿಗಳು ಹೇಳೋದು ಏನು?
ವಿಜಯ್‌ ಅವರು ವಾಹನ ಹತ್ತಿದ ಬಳಿಕ ಸೆಂಥಿಲ್‌ ಬಾಲಾಜಿ ಅವರನ್ನು ʼ10 ರೂ. ಮಂತ್ರಿʼ ಎಂದು ಟೀಕಿಸುವ ಹಾಡನ್ನು ಹಾಡಲಾಯಿತು. ಈ ವೇಳೆಗೆ ಜನ ಆಕ್ರೋಶ ಹೊರಹಾಕಿದಾಗ ಪೊಲೀಸರು ಲಾಠಿ ಬೀಸತೊಡಗಿದರು. ಇದರಿಂದ ಜನ ಭಯಗೊಂಡು ಓಡಲು ಆರಂಭಿಸಿದರು. ಶಿಶುಗಳನ್ನು ಹಿಡಿದಿರುವ ಪೋಷಕರು ಸೇರಿದಂತೆ ಎಲ್ಲರೂ ಮುಂದಕ್ಕೆ ತಳ್ಳಿಕೊಂಡು ಓಡಿದಾಗ ನೂಕುನುಗ್ಗಲು ನಡೆದು ಕಾಲ್ತುಳಿತ ಸಂಭವಿಸಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ:  Explainer | ಕುಂಭಮೇಳದಿಂದ ತಮಿಳುನಾಡು ದುರಂತದವರೆಗೆ – ದೇಶದ ಪ್ರಮುಖ ಕಾಲ್ತುಳಿತ ದುರಂತಗಳ ಪಟ್ಟಿ ಇಲ್ಲಿದೆ

ಇನ್ನೊಬ್ಬರು ಹೇಳಿದ ಪ್ರಕಾರ, ವಿಜಯ್ ಪ್ರಚಾರ ಸ್ಥಳಕ್ಕೆ ಬರುವವರೆಗೂ ಎಲ್ಲವೂ ಸರಿಯಾಗಿತ್ತು. ಇದ್ದಕ್ಕಿದ್ದಂತೆ ಜನರೇಟರ್‌ಗೆ ಸಂಪರ್ಕಗೊಂಡಿದ್ದ ಫ್ಲಡ್‌ಲೈಟ್‌ಗಳು ಆಫ್ ಆದವು. ಈ ವೇಳೆ ಮಹಿಳೆಯೊಬ್ಬಳು ಕಾಣೆಯಾದ ಮಗುವನ್ನು ಹುಡುಕಲು ಪ್ರಾರಂಭಿಸಿದಳು. ಈ ವೇಳೆ ಜನ ಆ ಮಗುವನ್ನು ಹುಡುಕಲು ಆರಂಭಿಸಿದಾಗ ತಳ್ಳಾಟ, ನೂಕಾಟ ನಡೆದು ಕಾಲ್ತುಳಿತ ಸಂಭವಿಸಿರಬಹುದು ಎಂದು ತಿಳಿಸಿದ್ದಾರೆ.