ತಡರಾತ್ರಿ ವಿದೇಶದಿಂದ ರಾಜ್ಯಕ್ಕೆ 1,396 ಮಂದಿ ಆಗಮನ – 10 ಮಂದಿಗೆ ಕೊರೊನಾ ತಗುಲಿರುವ ಶಂಕೆ

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಕೊರೊನಾ ವೈರಸ್ ಹರಡುವಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕೊರೊನಾ ವೈರಸ್ ಹರಡುವಿಕೆ ತಡೆಯುವ ಸಲುವಾಗಿ ಇಂದು ದೇಶಾದ್ಯಂತ ಜನತಾ ಕರ್ಫ್ಯೂ ಜಾರಿಯಲ್ಲಿದೆ. ಇತ್ತ ವಿದೇಶದಿಂದ ರಾಜ್ಯಕ್ಕೆ ಆಗಮಿಸುವ ಪ್ರಯಾಣಿಕರ ಸಂಖ್ಯೆಯೂ ಏರಿಕೆಯಾಗುತ್ತಿದ್ದು, ಶಂಕಿತ ಕೊರೊನಾ ಸೋಂಕಿತರು ಸಹ ಪತ್ತೆಯಾಗುತ್ತಿದ್ದಾರೆ.

ಶನಿವಾರ ರಾತ್ರಿ 8 ಗಂಟೆಯಿಂದ ಇಂದು ಬೆಳಿಗ್ಗೆ 8 ಗಂಟೆಯವರೆಗೆ ಅಂದರೆ 12 ಗಂಟೆಗಳ ಅವಧಿಯಲ್ಲಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 1,396 ಮಂದಿ ಪ್ರಯಾಣಿಕರು ವಿದೇಶಗಳಿಂದ ಆಗಮಿಸಿದ್ದಾರೆ. ಅವರೆಲ್ಲರನ್ನ ದೇವನಹಳ್ಳಿ ಆಕಾಶ್ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಪಡಿಸಲಾಗಿದ್ದು, 10 ಮಂದಿಯಲ್ಲಿ ಕೊರೊನಾ ಸೋಂಕಿನ ಲಕ್ಷಣಗಳು ಕಂಡು ಬಂದ ಹಿನ್ನೆಲೆ 10 ಮಂದಿಯನ್ನೂ ರಾಜೀವ್ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇವರಲ್ಲಿ 10 ವರ್ಷ ಒಳಗಿನ ಹಾಗೂ 60 ವರ್ಷ ಮೇಲ್ಪಟ್ಟ 74 ಮಂದಿಯನ್ನ ‘ಬಿ’ ಗ್ರೇಡ್ ಮಾಡಲಾಗಿದ್ದು, ಅವರನ್ನ ಸಪ್ತಗಿರಿ ಮೆಡಿಕಲ್ ಕಾಲೇಜಿಗೆ ರವಾನಿಸಿ ನಿಗಾ ವಹಿಸಲಾಗಿದೆ. ಉಳಿದಿರುವ 1,312 ಮಂದಿ ‘ಸಿ’ ಗ್ರೇಡ್ ಬಂದಿದ ಹಿನ್ನೆಲೆ ಕೈಗೆ ಸ್ಟ್ಯಾಂಪಿಂಗ್ ಮಾಡಿ ಮನೆಗಳಿಗೆ ಕಳುಹಿಸಲಾಗಿದ್ದು, ಹೋಂ ಕ್ವಾರಂಟೈನ್‍ನಲ್ಲಿರಲು ಸೂಚಿಸಲಾಗಿದೆ.

ಇಂದು ಮತ್ತು ನಾಳೆ ಸಹ ಅಂತರಾಷ್ಟ್ರೀಯ ವಿಮಾನಗಳು ಕೆಐಎಎಲ್‍ಗೆ ಆಗಮಿಸಲಿದ್ದು, ಸಾವಿರಾರು ಮಂದಿ ವಿದೇಶದಿಂದ ರಾಜ್ಯಕ್ಕೆ ಬರುವ ಸಾಧ್ಯತೆಯಿದ್ದು, ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ವಿಮಾನ ನಿಲ್ದಾಣ ಸಿಬ್ಬಂದಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *