ಸಾಮಾಜಿಕ ಜಾಲತಾಣದಲ್ಲಿ ಲತಾ ನಿಧನ ಸುದ್ದಿ ವೈರಲ್ – ಆರೋಗ್ಯವಾಗಿದ್ದಾರೆ ಎಂದ ಕುಟುಂಬಸ್ಥರು

ಮುಂಬೈ: ಗಾನ ಕೋಗಿಲೆ ಲತಾ ಮಂಗೇಶ್ಕರ್ ಅವರು ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈ ಸುದ್ದಿ ತಿಳಿದ ತಕ್ಷಣ ಲತಾ ಅವರು ನಿಧನರಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಬಗ್ಗೆ ಲತಾ ಕುಟುಂಬಸ್ಥರು ಪ್ರತಿಕ್ರಿಯಿಸಿದ್ದು, ಅವರು ಆರೋಗ್ಯವಾಗಿದ್ದಾರೆ ಎಂದು ಹೇಳಿದ್ದಾರೆ.

ಲತಾ ಅವರ ಆರೋಗ್ಯದ ಬಗ್ಗೆ ಪ್ರತಿಕ್ರಿಯಿಸಿದ ಕುಟುಂಬಸ್ಥರು, “ಲತಾ ಅವರು ಆರೋಗ್ಯವಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅವರು ನಿಧನರಾಗಿದ್ದಾರೆ ಎಂಬ ಸುಳ್ಳು ಸುದ್ದಿ ಹರಿದಾಡುತ್ತಿದೆ. ಅಲ್ಲದೆ ಲತಾ ಅವರ ಆರೋಗ್ಯಕ್ಕೆ ಸಂಬಂಧಿಸಿದಂತೆ ಹಲವು ಸುಳ್ಳು ಸುದ್ದಿಗಳು ಹರಿದಾಡುತ್ತಿದೆ. ಅವರು ಕ್ಷೇಮವಾಗಿದ್ದು, ವೈದ್ಯರು ಅವರನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದಾರೆ” ಎಂದು ಹೇಳಿದ್ದಾರೆ.

ಯಾವುದೇ ಕುಟುಂಬ ಅನಾರೋಗ್ಯದಿಂದ ಬಳಲುತ್ತಿರುವ ತಮ್ಮ ಕುಟುಂಬಸ್ಥರನ್ನು ಮನೆಗೆ ಕರೆದುಕೊಂಡು ಹೋಗುವುದಿಲ್ಲ. ಏಕೆಂದರೆ ಆಸ್ಪತ್ರೆಯಲ್ಲಿಯೇ ಉತ್ತಮ ಚಿಕಿತ್ಸೆ ನೀಡಲಾಗುತ್ತದೆ. ಲತಾ ಅವರು ಶೀಘ್ರ ಗುಣಮುಖರಾಗಿ ಮನೆಗೆ ಬರಬೇಕು ಎಂಬುದು ನಮ್ಮ ಆಶಯ. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಿಡಿಸಬೇಡಿ ಎಂದು ನಾನು ನೆಟ್ಟಿಗರಲ್ಲಿ ಮನವಿ ಮಾಡಿಕೊಳ್ಳುತ್ತೇವೆ ಎಂದರು.

ಇತ್ತ ನಿರ್ದೇಶಕ ಮಧುರ್ ಭಂಡಾರ್ಕರ್ ಅವರು ತಮ್ಮ ಟ್ವಿಟ್ಟರಿನಲ್ಲಿ, ಲತಾ ಅವರ ಕುಟುಂಬಸ್ಥರ ಜೊತೆ ಮಾತನಾಡಿದ್ದೇನೆ. ಅವರು ಆರೋಗ್ಯವಾಗಿದ್ದಾರೆ ಎಂದು ಹೇಳಿದ್ದಾರೆ. ದಯವಿಟ್ಟು ಸುಳ್ಳು ಸುದ್ದಿಗಳನ್ನು ಹರಿಡಿಸಬೇಡಿ ಎಂದು ಟ್ವೀಟ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಸುದ್ದಿ ನೋಡಿದ ನೆಟ್ಟಿಗರು ನಿರಂತರವಾಗಿ ಲತಾ ಅವರಿಗೆ ಶ್ರದ್ಧಾಂಜಲಿ ನೀಡಲು ಶುರು ಮಾಡಿದ್ದರು.

ಸೆ.28ಕ್ಕೆ 90ನೇ ವರ್ಷ ವಸಂತಕ್ಕೆ ಕಾಲಿಟ್ಟಿದ್ದ ಲತಾ ಮಂಗೇಶ್ಕರ್ ಅವರು ನವೆಂಬರ್ 11ರ ನಸುಕಿನ ಜಾವ 2 ಗಂಟೆ ಸಮಯದಲ್ಲಿ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಕೂಡಲೇ ಕುಟುಂಸ್ಥರು ಲತಾ ಅವರನ್ನು ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು ಮಾಡಿದ್ದರು.

Comments

Leave a Reply

Your email address will not be published. Required fields are marked *