ತೋಂಟದಚಾರ್ಯ ಸಿದ್ದಲಿಂಗ ಸ್ವಾಮೀಜಿಗಳಿಗೆ ಸಾವಿನ ಮುನ್ಸೂಚನೆ ಸಿಕ್ಕಿತ್ತಾ? ಶ್ರೀಗಳ ಆಡಿಯೋ ವೈರಲ್

ಗದಗ: ತೋಂಟದಚಾರ್ಯ ಸಿದ್ದಲಿಂಗ ಶ್ರೀಗಳು ತಮ್ಮ ಸಾವಿನ ಮುನ್ನ ದಿನ ಭಕ್ತರಿಗೆ ನೀಡಿದ್ದ ಪ್ರವಚನ ಸಂದರ್ಭದಲ್ಲಿ ಸಾವಿನ ಕುರಿತು ಮಾತನಾಡಿದ್ದರು. ಸದ್ಯ ಈ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಶ್ರೀಗಳು ತಮ್ಮ ಸಾವಿನ ಮುನ್ನವೇ ಈ ಕುರಿತು ಸೂಚನೆ ಲಭಿಸಿತ್ತಾ ಎಂಬ ಚರ್ಚೆ ಆರಂಭವಾಗಿದೆ.

ಲಿಂಗೈಕ್ಯ ತೋಂಟದಾಚಾರ್ಯ ಡಾ. ಸಿದ್ದಲಿಂಗ ಶ್ರೀಗಳ ಆಡಿಯೋ ವಿಜಯ ದಶಮಿಯ ದಿನದ ಸಂಜೆ ನೀಡಿದ್ದ ಪ್ರವಚನ ಸಂದರ್ಭದಲ್ಲಿ ಸೆರೆ ಹಿಡಿಯಲಾಗಿದೆ. ಈ ವೇಳೆ ಕರ್ನಾಟಕ ಸಾಂಸ್ಕೃತಿಕ ಇತಿಹಾಸ ಪ್ರಸ್ತಾಪ ಮಾಡಿದ್ದ ಶ್ರೀಗಳು ವಿಜಯ ನಗರ ಸಾಮ್ರಾಜ್ಯದ ಕುರಿತು ವಿವರಣೆ ನೀಡಿದ್ದರು. ಅಲ್ಲದೇ ಇತಿಹಾಸ ಪುಟಗಳಲ್ಲಿ ವಿಜಯ ನಗರ ಸಾಮ್ರಾಜ್ಯ ಮೇಲೆ ನಡೆದ ದಾಳಿಯ ಹಾಗೂ ಬಳಿಕ ಮೈಸೂರು ಸಾಮ್ರಾಜ್ಯ ಬೆಳೆದು ದಸರಾ ಹಬ್ಬದ ಪ್ರಾರಂಭದ ಐತಿಹಾಸಿಕ ಹಿನ್ನೆಲೆಯ ಕುರಿತು ಸಾಕಷ್ಟು ಮಾಹಿತಿ ನೀಡಿ ನಮ್ಮ ಹೆಮ್ಮೆಯ ಸಂಸ್ಕೃತಿಯ ಬಗ್ಗೆ ವಿವರಿಸಿದ್ದರು.

ಈ ವೇಳೆ ಸಾವಿನ ಬಗ್ಗೆ ಪ್ರಸ್ತಾಪ ಮಾಡಿದ್ದ ಶ್ರೀಗಳು, ಸಾವು ಯಾರನ್ನೂ ಬಿಡುವುದಿಲ್ಲ. ಹೊಸಹಳ್ಳಿ ಬೂದೀಶ್ವರ ಶ್ರೀಗಳು ನೂರಾರು ವರ್ಷ, ವಿಶ್ವೇಶ್ವರಯ್ಯ ಅವರು 101 ವರ್ಷ ಬದುಕಿದ್ದರು. ಅವರನ್ನು ಕೊನೆಗೆ ಸಾವು ಕರೆದೊಯ್ಯಿತು. ನಾವು ಸಾವನ್ನು ಎದುರಿಸಬೇಕು. ಆದರೆ ನಮಗೇ ಜನ್ಮ ನೀಡಿದ ತಾಯಿ, ದೇಶ ದೊಡ್ಡದು ಅವುಗಳಿಗೆ ಗೌರವ ನೀಡಿ. ನಮಸ್ಕಾರ, ಹಿರಿಯರಿಗೆ ವಂದನೆ ಮಾಡುವ ಗೌರವ ನೀಡುವ ಶಿಷ್ಟಾಚಾರಗಳನ್ನು ಮುಂದುವರೆಸಿ ಎಂದು ಕರೆ ನೀಡಿದರು. ಇದನ್ನು ಓದಿ: ಗದಗ ಗ್ರಾಮೀಣ ವಿವಿಗೆ ಸಿದ್ದಲಿಂಗ ಶ್ರೀಗಳ ಹೆಸರು : ಸಿಎಂ ಎಚ್‍ಡಿಕೆ

ಕೇರಳ ಅಯ್ಯಪ್ಪ ಸ್ವಾಮಿ ದೇವಾಲಯದ ಕುರಿತು ಪ್ರಸ್ತಾಪ ಮಾಡಿದ್ದ ಶ್ರೀಗಳು, ಪ್ರಜ್ಞಾವಂತ ಹೆಣ್ಣು ಮಕ್ಕಳು ಈ ಕುರಿತು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿ ಪ್ರವೇಶ ಪಡೆಯಲು ಅನುಮತಿ ಪಡೆದರು. ಇದಕ್ಕೆ ಭಕ್ತರು ಅಡ್ಡಿಪಡಿಸಿದರು, ಆದರೆ ಅವರ ನಡೆ ಉತ್ತಮವಾಗಿರಲಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಸಮಾಜದಲ್ಲಿ ಗೌರವ ಮುಖ್ಯ ಉತ್ತಮ ಪ್ರಯತ್ನ ಮಾಡಿ ಯಶಸ್ವಿ ಪಡೆಯಿರಿ. ಧೈರ್ಯ ಕಳೆದುಕೊಳ್ಳಬೇಡಿ, ಆತ್ಮಸ್ಥೈರ್ಯದಿಂದ ಜೀವನ ನಡೆಸಿ. ಮಕ್ಕಳಿಗೆ ಪುಸ್ತಕ ಓದುವ ಪ್ರವೃತ್ತಿ ಹೆಚ್ಚಾಗುವಂತೆ ಮಾಡಿ ಎಂದು ಕರೆ ನೀಡಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *