ಬೆಂಗ್ಳೂರು ಜೈಲಿನಲ್ಲಿ ಉಗ್ರ ಕೃತ್ಯ ಎಸಗಿ ಪರಾರಿ – ರುವಾಂಡದಲ್ಲಿ ಸೆರೆ

– ರುವಾಂಡದ ರಾಜಧಾನಿ ಕಿಗಾಲಿಯಲ್ಲಿ ಸಲ್ಮಾನ್‌ ಬಂಧನ
– ಈ ವರ್ಷದ ಜನವರಿಯಲ್ಲಿ ಚಾರ್ಜ್‌ಶೀಟ್‌ ಸಲ್ಲಿಸಿದ್ದ ಎನ್‌ಐಎ

ನವದೆಹಲಿ: ಬೆಂಗಳೂರು ಜೈಲಿನಲ್ಲಿ (Bengaluru Jail) ಉಗ್ರ ಕೃತ್ಯ ಎಸಗಿ ರುವಾಂಡಕ್ಕೆ (Rwanda) ಪರಾರಿಯಾಗಿದ್ದ ಲಷ್ಕರ್‌ ಉಗ್ರನನ್ನು ರಾಷ್ಟ್ರೀಯ ತನಿಖಾ ದಳ (NIA) ಬಂಧಿಸಿದೆ.

ಸಲ್ಮಾನ್‌ ಖಾನ್ ಬಂಧಿತ ಉಗ್ರ. ರುವಾಂಡಾ ತನಿಖಾ ಬ್ಯೂರೋ (RIB), ಇಂಟರ್‌ಪೋಲ್ ಮತ್ತು ರಾಷ್ಟ್ರೀಯ ಕೇಂದ್ರ ಬ್ಯೂರೋಗಳ (NCBs) ಸಹಯೋಗದೊಂದಿಗೆ ಬುಧವಾರ ರುವಾಂಡಾದ ರಾಜಧಾನಿ ಕಿಗಾಲಿಯಲ್ಲಿ ಬಂಧನ ಮಾಡಲಾಗಿದೆ. ಇಂದು ರುವಾಂಡ ಉಗ್ರನನ್ನು ಭಾರತಕ್ಕೆ ಹಸ್ತಾಂತರಿಸಿದೆ.

ಬೆಂಗಳೂರು ಜೈಲಿನಲ್ಲಿದ್ದುಕೊಂಡೇ ಸಹ ಕೈದಿಗಳನ್ನು ಸೆಳೆದು ಉಗ್ರ ಚಟುವಟಿಕೆಗೆ ಬಳಕೆ ಮಾಡಿದ ಪ್ರಕರಣದಲ್ಲಿ ಸಲ್ಮಾನ್ ಆರೋಪಿಯಾಗಿದ್ದಾನೆ. ಈತ ಉಗ್ರರಿಗೆ ಸ್ಫೋಟಕಗಳನ್ನು ಪೂರೈಸುವ ಮೂಲಕ ದುಷ್ಕೃತ್ಯಗಳಿಗೆ ಸಹಕಾರ ನೀಡುತ್ತಿದ್ದ.

ಪೋಸ್ಕೋ ಕೃತ್ಯ ಎಸಗಿ ಸಲ್ಮಾನ್‌ ಬೆಂಗಳೂರು ಜೈಲು ಸೇರಿದ್ದ. 2018 ಮತ್ತು 2022 ರ ಜೈಲುವಾಸದ ಅವಧಿಯಲ್ಲಿ ಜಿವಾವಾಧಿ ಶಿಕ್ಷೆಗೆ ಒಳಗಾಗಿದ್ದ ಉಗ್ರ ನಾಸೀರ್ (Naseer) ಸಂಪರ್ಕಕ್ಕೆ ಈತ ಬಂದಿದ್ದ. ಈತನ ಮಾತಿಗೆ ಮರುಳಾಗಿ ಮೂಲಭೂತವಾದ ಕಡೆಗೆ ಆಕರ್ಷಿತನಾಗಿದ್ದ. ಅಷ್ಟೇ ಅಲ್ಲದೇ ಸಹ ಕೈದಿಗಳನ್ನು ಸೆಳೆದು ಅವರನ್ನು ಉಗ್ರರನ್ನಾಗಿ ರೂಪಿಸುತ್ತಿದ್ದ.‌

 

 

 

ಜೈಲಿನಿಂದ ಬಿಡುಗಡೆಯಾದ ಬಳಿಕ ಆತ ಉಗ್ರರ ಸಂಪರ್ಕ ಸಾಧಿಸಿ ಅವರಿಗೆ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಸ್ಫೋಟಕಗಳ ಸಂಗ್ರಹಣೆ ಮತ್ತು ವಿತರಣೆ ಮಾಡುವ ಮೂಲಕ ಸಹಕಾರ ನೀಡುತ್ತಿದ್ದ. ಭಯೋತ್ಪಾದನಾ ಕೃತ್ಯದಲ್ಲಿ ತನ್ನ ಹೆಸರು ಬೆಳಕಿಗೆ ಬರುತ್ತಿದ್ದಂತೆ ಸಲ್ಮಾನ್‌ ಭಾರತದಿಂದ ಪರಾರಿಯಾಗಿದ್ದ.

ಕಳೆದ ವರ್ಷದ ಅಕ್ಟೋಬರ್ 25 ರಂದು ಬೆಂಗಳೂರು ಜೈಲಿನಲ್ಲಿದ್ದುಕೊಂಡೇ ಸಹ ಕೈದಿಗಳನ್ನು ಸೆಳೆದು ಉಗ್ರ ಚಟುವಟಿಕೆಗೆ ಬಳಕೆ ಮಾಡಿದ ಪ್ರಕರಣದ ತನಿಖೆಯನ್ನು ಸಿಸಿಬಿಯಿಂದ ಎನ್‌ಐಎ ವಹಿಸಿಕೊಂಡಿತ್ತು. ಸಲ್ಮಾನ್ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಶಸ್ತ್ರಾಸ್ತ್ರ ಕಾಯ್ದೆ ಮತ್ತು ಸ್ಫೋಟಕ ವಸ್ತುಗಳ ಕಾಯ್ದೆಯಡಿ ಆರೋಪ ಹೊರಿಸಿ ಪ್ರಕರಣ ದಾಖಲಿಸಲಾಗಿತ್ತು.

 

ಈ ವರ್ಷ ಆಗಸ್ಟ್ 2 ರಂದು ಎನ್ಐಎ ಕೋರಿಕೆಯ ಮೇರೆಗೆ ಇಂಟರ್‌ಪೋಲ್‌ ರೆಡ್‌ ಕಾರ್ನರ್‌ ನೋಟಿಸ್‌ ಜಾರಿ ಮಾಡಿತ್ತು. ಈ ನೋಟಿಸ್‌ ಹಿನ್ನೆಲೆಯಲ್ಲಿ ರುವಾಂಡಾದ ಅಧಿಕಾರಿಗಳು ಸಲ್ಮಾನ್‌ನನ್ನು ಬಂಧಿಸಿ ಭಾರತೀಯ ತನಿಖಾ ಸಂಸ್ಥೆಗೆ ಹಸ್ತಾಂತರಿಸಿದ್ದಾರೆ.

2024 ರಲ್ಲಿ ಇಂಟರ್‌ಪೋಲ್ ಒಳಗೊಂಡಂತೆ ಸಂಘಟಿತ ಪ್ರಯತ್ನದ ಮೂಲಕ ದೇಶ ಬಿಟ್ಟು ಪರಾರಿಯಾಗಿದ್ದ 26 ಮಂದಿಯನ್ನು ಭಾರತಕ್ಕೆ ತನಿಖಾ ಸಂಸ್ಥೆಗಳು ಕರೆತಂದಿವೆ.

ಏನಿದು ಪ್ರಕರಣ?
2023ರ ಜುಲೈನಲ್ಲಿ ಆರ್‌ಟಿ ನಗರದ ಮನೆ ಮೇಲೆ ದಾಳಿ ಮಾಡಿದ ಬೆಂಗಳೂರು ಸಿಸಿಬಿ ಪೊಲೀಸರು (CCB Police) ಐವರು ಆರೋಪಿಗಳನ್ನು ಬಂಧಿಸಿದ್ದರು. ಈ ವೇಳೆ ಜೀವಂತ ಗ್ರೆನೇಡ್‌ ಪತ್ತೆಯಾಗಿತ್ತು. ಈ ಪ್ರಕರಣದ ಆರೋಪಿಗಳ ಜೊತೆ ಜೈಲಿನಲ್ಲಿದ್ದ ಉಗ್ರ ಟಿ.ನಾಸೀರ್ (T Naseer) ಸಂಪರ್ಕ ಬೆಳೆಸಿದ್ದ ವಿಚಾರ ತನಿಖೆಯಿಂದ ಬಯಲಾಗಿತ್ತು. ನಂತರ ಈ ಪ್ರಕರಣ ಎನ್‌ಐಎಗೆ ವರ್ಗಾವಣೆಯಾಗಿತ್ತು

ಬೆಂಗಳೂರು ದಾಳಿಯ ವೇಳೆ ಉಗ್ರರ ಮನೆಯಲ್ಲಿ ಪತ್ತೆಯಾಗಿದ್ದ ಗ್ರೆನೇಡ್‌ಗಳು
ಬೆಂಗಳೂರು ದಾಳಿಯ ವೇಳೆ ಉಗ್ರರ ಮನೆಯಲ್ಲಿ ಪತ್ತೆಯಾಗಿದ್ದ ಗ್ರೆನೇಡ್‌ಗಳು

ಈ ವರ್ಷದ ಜನವರಿ 12 ರಂದು ಎನ್‌ಐಎ ಈ ಪ್ರಕರಣದ ಸಂಬಂಧ 8 ಮಂದಿ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಿತ್ತು. ಚಾರ್ಜ್‌ಶೀಟ್ ಮಾಡಿರುವ ಆರೋಪಿಗಳಲ್ಲಿ ಕೇರಳದ ಕಣ್ಣೂರು ಜಿಲ್ಲೆಯ ಟಿ ನಾಸೀರ್ 2013 ರಿಂದ ಬೆಂಗಳೂರಿನ ಸೆಂಟ್ರಲ್ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾನೆ. ಉಳಿದ ಇಬ್ಬರು ಆರೋಪಿಗಳಾದ ಜುನೈದ್ ಅಹ್ಮದ್ ಅಲಿಯಾಸ್ ಜೆಡಿ ಮತ್ತು ಸಲ್ಮಾನ್ ಖಾನ್ ವಿದೇಶಕ್ಕೆ ಪರಾರಿಯಾಗಿದ್ದ ವಿಚಾರವನ್ನು ಎನ್‌ಐಎ ಉಲ್ಲೇಖಿಸಿತ್ತು.

ಚಾರ್ಜ್‌ಶೀಟ್‌ನಲ್ಲಿ ಏನಿತ್ತು?
ಆರ್‌ಟಿ ನಗರ ಮನೆಯಲ್ಲಿ ಶೋಧ ಕಾರ್ಯದ ವೇಳೆ ಆರೋಪಿಗಳ ಬಳಿ 7 ನಾಡ ಪಿಸ್ತೂಲ್, 45 ಜೀವಂತ ಗುಂಡು, ಗ್ರೆನೇಡ್ ಹಾಗೂ ವಾಕಿಟಾಕಿಗಳು ಸಿಕ್ಕಿದ್ದವು. ವಿಚಾರಣೆ ಸಂದರ್ಭದಲ್ಲಿ ಆರೋಪಿಗಳು ಬೆಂಗಳೂರಿನಲ್ಲಿ ಸರಣಿ ಬಾಂಬ್‌ ಸ್ಫೋಟ ನಡೆಸಲು ಮುಂದಾಗಿದ್ದರು ಎಂಬ ವಿಚಾರ ತನಿಖೆಯಿಂದ ಬಯಲಾಗಿತ್ತು.

ಬೆಂಗಳೂರು ದಾಳಿಯ ವೇಳೆ ಉಗ್ರರ ಮನೆಯಲ್ಲಿ ಪತ್ತೆಯಾಗಿದ್ದ ಗ್ರೆನೇಡ್‌ಗಳು ಪೌಡರ್ ರೂಪದ ಕೆಮಿಕಲ್ ಬಳಸಿ ಪೆಟ್ಟಿಗೆಯೊಂದರಲ್ಲಿ ಆರೋಪಿಗಳು ಅಡಗಿಸಿಟ್ಟಿದ್ದರು. ಈ ಬಗ್ಗೆ ಮಾಹಿತಿ ಪಡೆದ ನಂತರ ತನಿಖಾಧಿಕಾರಿಗಳು ಬಾಂಬ್ ನಿಷ್ಟ್ರೀಯ ದಳ (BDDS) ಮತ್ತು FSL ಅಧಿಕಾರಿಗಳ ಜೊತೆಯಲ್ಲಿ ಕಾರ್ಯಾಚರಣೆ ನಡೆಸಿ ಸಜೀವ ಗ್ರೇನೆಡ್‌ಗಳನ್ನ ಪತ್ತೆಮಾಡಿ ವಶಪಡಿಸಿಕೊಳ್ಳಲಾಗಿತ್ತು. ಗ್ರೆನೇಡ್ (Grenade) ಮೇಲಿದ್ದ ಮೇಡ್ ಇನ್ ವಿವರವನ್ನೇ ಆರೋಪಿಗಳು ಅಳಿಸಿ ಹಾಕಿದ್ದರು.

 

ಸೆರೆ ಸಿಕ್ಕ ಶಂಕಿತರ ಉಗ್ರರ ಹಿಂದೆ ಬ್ಯಾಕ್ ಬೋನ್ ಆಗಿದ್ದ ಮಾಸ್ಟರ್ ಮೈಂಡ್ ಜುನೈದ್ ವಿದೇಶದಲ್ಲಿದ್ದುಕೊಂಡೇ ಬೆಂಗಳೂರಿನಲ್ಲಿ ಬಂಧನಕ್ಕೆ ಒಳಗಾದವರನ್ನು ಸಾಕುತ್ತಿದ್ದ, ಬೆಂಗಳೂರಿನಲ್ಲಿದ್ದವರಿಗೆ ಲಕ್ಷ ಲಕ್ಷ ರೂ. ಫಂಡಿಂಗ್ ಮಾಡ್ತಿದ್ದ. ಜೊತೆಗೆ ಏನೇನು ಮಾಡಬೇಕು ಅಂತಾ ಟ್ರೈನಿಂಗ್ ಕೊಡ್ತಿದ್ದ. ಅದಕ್ಕಾಗಿ ಬೆಂಗಳೂರಿನಲ್ಲಿ ಎಲ್ಲೆಲ್ಲಿ ಕೃತ್ಯ ಎಸಬೇಕು ಅನ್ನೋದರ ನೀಲನಕ್ಷೆಯನ್ನೂ (ಬ್ಲೂ ಪ್ರಿಂಟ್) ಸಿದ್ಧ ಮಾಡಿಕೊಂಡಿದ್ದ.

ಜುನೈದ್ ಕೊಡುವ ಮಾರ್ಗದರ್ಶನದಂತೆ ಸಿಲಿಕಾನ್ ಸಿಟಿಯಲ್ಲಿ ಶಂಕಿತರು ಸ್ಫೋಟಕ್ಕೆ ಸಂಚು ರೂಪಿಸುತ್ತಿದ್ದರು. ನಗರದಲ್ಲಿ 10ಕ್ಕೂ ಹೆಚ್ಚು ಸ್ಥಳಗಳನ್ನು ಗುರುತಿಸಿಕೊಂಡಿದ್ದರು ವಿಚಾರ ಅಂಶ ಚಾರ್ಜ್‌ಶೀಟ್‌ನಲ್ಲಿತ್ತು.