ಲಕ್ಷ್ಮಿ ಹೆಬ್ಬಾಳ್ಕರ್ ತಲೆ ದಂಡಕ್ಕೆ ಮುಹೂರ್ತ ಫಿಕ್ಸ್?

ಬೆಂಗಳೂರು: ರಾಜ್ಯ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆಯಾಗಿರುವ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಶೀಘ್ರದಲ್ಲಿಯೇ ಅಧ್ಯಕ್ಷ ಸ್ಥಾನದಿಂದ ಪದಚ್ಯುತಿಗೊಳಿಸಲು ಮುಹೂರ್ತ ಸಿದ್ಧವಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಹೌದು, ಶೀಘ್ರದಲ್ಲಿಯೇ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ಮಾಜಿ ಆಗಲಿದ್ದಾರೆ. ಇಷ್ಟು ದಿನ ತೆರೆ ಮರೆಯಲ್ಲಿ ನಡೆಯುತ್ತಿದ್ದ ಪ್ರಯತ್ನಕ್ಕೆ ಈಗ ಅಧಿಕೃತ ಚಾಲನೆ ಸಿಕ್ಕಂತಾಗಿದೆ. ಈಗಾಗಲೇ ಲಕ್ಷ್ಮಿ ಹೆಬ್ಬಾಳ್ಕರ್ ಪದಚ್ಯುತಿಗೆ ದೆಹಲಿಯಲ್ಲಿ ಮುಹೂರ್ತ ನಿಗದಿಯಾಗುತ್ತಿದೆ ಎನ್ನುವ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ.

ಲಕ್ಷ್ಮಿ ಹೆಬ್ಬಾಳ್ಕರ್ ರಾಜೀನಾಮೆಯಿಂದ ತೆರವಾಗುವ ಸ್ಥಾನಕ್ಕಾಗಿ ಮಹಿಳಾ ಕಾಂಗ್ರೆಸ್ ನಲ್ಲಿ ಲಾಬಿ ಹೆಚ್ಚಾಗಿದ್ದು, ಇನ್ನು 15 ದಿನದ ಒಳಗಾಗಿ ನೂತನ ಮಹಿಳಾ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಯಾಗಲಿದೆ. ಈಗಾಗಲೇ ರಾಷ್ಟ್ರೀಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಶ್ಮಿತಾ ದೇವ್ ರಾಜ್ಯದ 12 ಜನ ಮಹಿಳಾ ನಾಯಕಿಯರನ್ನು ಕರೆದು ಸಂದರ್ಶನ ನಡೆಸಿದ್ದಾರೆ. ಅಲ್ಲದೇ ಬುಧವಾರವೂ ಸಹ ರಾಜ್ಯದ 9 ಮಹಿಳಾ ಕಾಂಗ್ರೆಸ್ ಮುಖಂಡರನ್ನ ದೆಹಲಿಗೆ ಕರೆದು ಸಂದರ್ಶನ ನಡೆಸಿದ್ದಾರೆ. ಇಂದು 3 ಜನರ ಸಂದರ್ಶನ ನಡೆಯುತ್ತಿದೆ ಎನ್ನಲಾಗಿದೆ.

ಪುಷ್ಪ ಅಮರ್ ನಾಥ್, ನಾಗಲಕ್ಷ್ಮಿ ಚೌದರಿ, ಕಮಲಾಕ್ಷಿ ರಾಜಣ್ಣ, ಶಾರದಾ ಗೌಡ ಹಾಗೂ ಗೀತಾ ರಾಜಣ್ಣ ಸೇರಿದಂತೆ ಒಟ್ಟು 12 ಜನ ಮಹಿಳಾ ನಾಯಕಿಯರ ಸಂದರ್ಶನ ಮಾಡಲಾಗಿದೆ. ಇವರಲ್ಲಿ ಒಬ್ಬರು ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆ ಆಗುವುದು ಬಹುತೇಕ ಖಚಿತವಾಗಿದೆ ಎಂದು ಹೇಳಲಾಗುತ್ತಿದೆ.

ಹಾಲಿ ಅಧ್ಯಕ್ಷೆಯಾಗಿರುವ ಲಕ್ಷ್ಮೀ ಹೆಬ್ಬಾಳ್ಕರ್, ಲೋಕಸಭಾ ಚುನಾವಣೆಯವರೆಗೂ ಮುಂದುವರಿಯಲು ಅವಕಾಶ ಕೊಡಿ ಎಂಬ ಮನವಿಗೆ ಸುಶ್ಮಿತಾ ದೇವ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹೀಗಾಗಿ ಲಕ್ಷ್ಮೀ ಹೆಬ್ಬಾಳ್ಕರ್ ಅನಿವಾರ್ಯವಾಗಿ ತಮ್ಮ ಸ್ಥಾನವನ್ನು ಬಿಟ್ಟುಕೊಡಲೇಬೇಕಾದ ಪರಿಸ್ಥಿತಿ ಎದುರಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *