ಆರ್‌ಎಸ್‌ಎಸ್ ಕುರಿತು ಬರಲಿದೆ ಮಹಾಸಿನಿಮಾ!

ಬೆಂಗಳೂರು: ಲಹರಿ ಆಡಿಯೋ ಸಂಸ್ಥೆ ಮಾಲೀಕರಾದ ಲಹರಿ ವೇಲು ಅವರು ಆರ್‌ಎಸ್‌ಎಸ್ ಬಗ್ಗೆ ಸಿನಿಮಾ ಮಾಡಲಿದ್ದಾರೆ. ಈ ಚಿತ್ರಕ್ಕೆ ಬಾಹುಬಲಿ ಚಿತ್ರಕ್ಕೆ ಕಥೆ ಬರೆದಿದ್ದ ವಿಜಯೇಂದ್ರ ಪ್ರಸಾದ್ ಕಥೆ ಬರೆದಿರುವುದು ವಿಶೇಷ.

ಸುಮಾರು 7-8 ತಿಂಗಳು ಮುಂಚೆ ಬಾಹುಬಲಿ-2 ಚಿತ್ರ ಬಿಡುಗಡೆಯಾದಾಗ ಆರ್‌ಎಸ್‌ಎಸ್ ಎಂಬ ಸಿನಿಮಾವನ್ನು ನಾನೇಕೆ ಮಾಡಬಾರದು ಎಂಬ ಅಲೋಚನೆ ನನ್ನ ಮನಸ್ಸಿಗೆ ಬಂತು. ಆ ಅಲೋಚನೆ ಬರುತ್ತಿದ್ದ ಹಾಗೆ ನನ್ನ ಅಣ್ಣನ ಮಗ ಚಂದ್ರು ಗೆ ಕನ್ನಡ, ಆಂಧ್ರ, ತಮಿಳು ಹಾಗೂ ಮುಂಬೈ ಸೇರಿದಂತೆ ಎಲ್ಲ ಫಿಲ್ಮ್ ಚೇಂಬರ್ ನಲ್ಲಿ ಈ ಹೆಸರಿನ ಟೈಟಲ್ ರಿಜಿಸ್ಟರ್ ಮಾಡಲು ಹೇಳಿದೆ ಎಂದು ಲಹರಿ ವೇಲು ಹೇಳಿದ್ದಾರೆ.

ಸಿನಿಮಾದ ಟೈಟಲ್ ರಿಜಿಸ್ಟರ್ ಮಾಡುತ್ತಿದ್ದಂತೆ ಈ ಚಿತ್ರಕ್ಕೆ ಕಥೆ ರಾಜಮೌಳಿ ಅವರ ತಂದೆ ವಿಜಯೇಂದ್ರ ಪ್ರಸಾದ್ ಅವರಿಂದ ಕಥೆ ಬರೆಸುವುದು ಉತ್ತಮ ಎನ್ನಿಸಿತು. ಆಗ ಮನೋಹರ್ ನಾಯ್ಡು ಅವರು ಚಿತ್ರದ ಕಥೆಗಾಗಿ ವಿಜಯೇಂದ್ರ ಪ್ರಸಾದ್ ಅವರ ಜೊತೆ ಮಾತನಾಡಲು ಹೇಳಿದ್ದರು. ವಿಜಯೇಂದ್ರ ಪ್ರಸಾದ್‍ರನ್ನು ಭೇಟಿಯಾಗಲು ನಾನು ಹೈದರಾಬಾದ್‍ಗೆ ಹೋಗಿದ್ದೆ. ಆಗ ಆರ್‌ಎಸ್‌ಎಸ್ ಬಗ್ಗೆ ಸಿನಿಮಾ ಮಾಡಬೇಕೆಂದುಕೊಂಡಿದ್ದೇನೆ. ಅದಕ್ಕಾಗಿ ನೀವು ಕಥೆ ಬರೆಯಬೇಕು ಎಂದು ಕೇಳಿಕೊಂಡೆ. ಅವರು ನನ್ನ ಮಾತು ಕೇಳಿ ಖುಷಿಯಾದರು ಎಂದು ಅವರು ತಿಳಿಸಿದರು.

ಆರ್‌ಎಸ್‌ಎಸ್ 1932ನೇ ಇಸ್ವಿಯಿಂದ ಇದೆ. ನಿಮಗೆ ಈ ಐಡಿಯಾ ಹೇಗೆ ಬಂತು ಎಂದು ಅವರು ಕೇಳಿದ್ದರು. ಸುಮ್ಮನೆ ಯೋಚಿಸುತ್ತಿದ್ದಾಗ ಆರ್‌ಎಸ್‌ಎಸ್ ಬಗ್ಗೆ ಯಾಕೆ ಚಿತ್ರ ಮಾಡಬಾರದು ಎಂದುಕೊಂಡೆ. ಹಾಗಾಗಿ ಚಿತ್ರಕ್ಕೆ ನಿಮ್ಮ ಹತ್ತಿರ ಕಥೆ ಬರೆಸಿಕೊಳ್ಳಲು ಬಂದಿದ್ದೇನೆ. ನನಗೆ ನನ್ನ ದೇಶ,  ಧರ್ಮ ಹಾಗೂ ಆರ್ ಎಸ್‍ಎಸ್ ಬಗ್ಗೆ ನನಗೆ ಬಹಳ ಅಭಿಮಾನ ಇದೆ ಎಂದು ಹೇಳಿ ವಿಜಯೇಂದ್ರ ಪ್ರಸಾದ್ ಚಿತ್ರದ ಕಥೆ ಬರೆಯಲು ಒಪ್ಪಿಕೊಂಡರು ಎಂದು ಅವರು ವಿವರಿಸಿದರು.

ಸುಮಾರು 7-8 ತಿಂಗಳಿಂದ 27 ಜನ ಸ್ಕ್ರಿಪ್ಟ್ ರೈಟರ್ಸ್ ಇದ್ದು, ಇವರಿಗೆ ಕ್ಯಾಪ್ಟನ್ ಆಗಿ ವಿಜಯೇಂದ್ರ ಪ್ರಸಾದ್ ಸಿನಿಮಾದ ಕಥೆ ತಯಾರಿಸಿದ್ದಾರೆ. ಈ ಕಥೆ ಬರೆಯಲು ತುಂಬಾ ಜನ ಕಷ್ಟಪಟ್ಟಿದ್ದಾರೆ. ಇದರಲ್ಲಿ ಗ್ರ್ಯಾಮಿ ಅವಾರ್ಡ್ ವಿಜೇತ ರಿಕ್ಕಿ ಕೇಜ್, ಚೆನ್ನೈ ಆಡಿಟರ್ ಗುರುಮೂರ್ತಿ, ಮೋಹನ್ ಭಗವತ್ ಅವರನ್ನು ನೆನಪಿಸಿಕೊಳ್ಳಲೇಬೇಕು. ಗುರುಮೂರ್ತಿ ಸಹಾಯದಿಂದಲೇ ನಾನು ನಾಗ್ಪುರದಲ್ಲಿರುವ ಮೋಹನ್ ಭಗವತ್ ಅವರನ್ನು ಭೇಟಿಯಾಗಲು ಸಾಧ್ಯವಾಯಿತು ಎಂದು ವೇಲು ತಿಳಿಸಿದರು.

ಮೋಹನ್ ಭಗವತ್ ಅವರನ್ನು ನಾನು, ಗುರುಮೂರ್ತಿ, ವಿಜಯೇಂದ್ರ ಪ್ರಸಾದ್ ಹಾಗೂ ರಿಕ್ಕಿ ಕೇಜ್ ಭೇಟಿ ಮಾಡಿ ಚಿತ್ರದ ಬಗ್ಗೆ ತಿಳಿಸಿದ್ದಾಗ ಅವರು ಕೂಡ ಈ ಚಿತ್ರಕ್ಕೆ ಒಪ್ಪಿಗೆ ಸೂಚಿಸಿದ್ದರು. ಚಿತ್ರಕ್ಕಾಗಿ ಎಲ್ಲ ಮಾಹಿತಿ ಸಂಗ್ರಹವಾದ ಮೇಲೆ ವಿಜಯೇಂದ್ರ ಪ್ರಸಾದ್ ಅವರು ಚಿತ್ರಕಥೆಯನ್ನು ತಯಾರಿಸಿದರು. ನಂತರ ಚಿತ್ರದ ಕಥೆ ಫೈನಲ್ ಮಾಡಲು ಪುನಃ ಮೋಹನ್ ಭಗವತ್ ಹತ್ತಿರ ಹೋಗಿದ್ದವು. ಕಥೆ ಅದ್ಭುತವಾಗಿದೆ. ಈ ಚಿತ್ರಕ್ಕೆ ನಮ್ಮ ಬೆಂಬಲ ಸಂಪೂರ್ಣವಾಗಿರುತ್ತದೆ ಎಂದು ಮೋಹನ್ ಭಾಗವತ್ ತಿಳಿಸಿದರು ಎಂದು ವೇಲು ಮಾಹಿತಿ ನೀಡಿದರು.

ನಮ್ಮ ಸಂಸ್ಥೆ ಹಾಗೂ ಬಾಂಬೆ ಚಿತ್ರರಂಗದಲ್ಲಿರುವ ನನ್ನ ಆತ್ಮೀಯ ಸ್ನೇಹಿತ ರಾಜ್ ಸಿಂಗ್ ಈ ಚಿತ್ರದ ಸಹ-ನಿರ್ಮಾಪಕರು. ಅವರು ಕೂಡ ಈ ಸಿನಿಮಾಗಾಗಿ ಬಹಳ ಶ್ರಮಪಟ್ಟಿದ್ದಾರೆ. ಚಿತ್ರಕಥೆಗಾಗಿ 7 ತಿಂಗಳು ಕೆಲಸ ಮಾಡಿದ್ದು, ಇನ್ನೂ ಕೆಲವು ದಿನಗಳಲ್ಲೇ ಚಿತ್ರದ ತಾರಾಗಣ, ನಿರ್ದೇಶಕರ ಆಯ್ಕೆ ನಡೆಯಲಿದೆ. ನಂತರ ಚಿತ್ರ ಸೆಟ್ಟೇರಲಿದೆ ಎಂದು ತಿಳಿಸಲು ಇಷ್ಟಪಡುತ್ತೇನೆ ಎಂದು ವೇಲು ಹೇಳಿದರು.

ಈ ಸಿನಿಮಾ ಹಿಂದಿ, ತೆಲುಗು ಹಾಗೂ ಎಲ್ಲ ಭಾಷೆಗಳಲ್ಲಿ ಸಿನಿಮಾ ತಯಾರಿಸಲು ನಿರ್ಧರಿಸಿದ್ದೇವೆ. ಈ ಸಿನಿಮಾ ಒಂದು ಭಾಷೆಗೆ ಸೀಮಿತ ಅಲ್ಲ. ಆರ್‌ಎಸ್‌ಎಸ್ ನಮ್ಮ ದೇಶಕ್ಕಾಗಿ ಪಟ್ಟಿರುವ ಕಷ್ಟಗಳೆಲ್ಲ ಸಿನಿಮಾದಲ್ಲಿ ಪಕ್ಕಾ ಕಮರ್ಶಿಯಲ್ ಆಗುತ್ತದೆ. ಈ ಚಿತ್ರ ಬೇರೆ ಬೇರೆ ಭಾಷೆಯಲ್ಲಿ ಬರುತ್ತಿದ್ದು, ಆಯಾ ಭಾಷೆಗೆ ಬೇರೆ ಬೇರೆ ನಟರು ನಟಿಸಬಹುದು. ಇದೊಂದು ಹೇವಿ ಸ್ಕ್ರಿಪ್ಟ್ ಆಗಿದೆ ಎಂದು ವಿವರಿಸಿದರು.

Comments

Leave a Reply

Your email address will not be published. Required fields are marked *