74 ಕೆಜಿಯ ವೇಷ ಧರಿಸಿ ಕೌರವನ ಪಾತ್ರಕ್ಕೆ ಸಿದ್ಧಗೊಂಡ ಶ್ರಮ ವಿವರಿಸಿದ ದರ್ಶನ್

ಬೆಂಗಳೂರು: ಕುರುಕ್ಷೇತ್ರ ಸಿನಿಮಾದ ಕೇಂದ್ರ ಬಿಂದು ದುರ್ಯೋಧನ ಪಾತ್ರಕ್ಕೆ ಹೇಗೆ ಸಿದ್ಧತೆ ಮಾಡಿಕೊಂಡಿದ್ದರು ಎಂಬ ವಿಚಾರವನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಸುದ್ದಿಗೋಷ್ಠಿಯಲ್ಲಿ ರಿವೀಲ್ ಮಾಡಿದ್ದಾರೆ.

ದುರ್ಯೋಧನ ಪಾತ್ರಕ್ಕೆ ನನ್ನ ತಂದೆ ಒಬ್ಬರೇ ಸ್ಫೂರ್ತಿಯಲ್ಲ. ನಾನು ಅನೇಕ ಪೌರಾಣಿಕ ಸಿನಿಮಾಗಳನ್ನು ನೋಡಿದ್ದೇನೆ. ಭಕ್ತ ಪ್ರಹ್ಲಾದ, ಮಯೂರ ಸೇರಿದಂತೆ ಅನೇಕ ಚಿತ್ರಗಳನ್ನು ನೋಡಿದ್ದೆ ಎಂದು ತಿಳಿಸಿದರು.

ಮಯೂರ ಸಿನಿಮಾದಲ್ಲಿರುವ ಕಾಸ್ಟ್ಯೂಮ್ ಅನ್ನು ಚಾರುತಂತಿ ಹಾಡಿನಲ್ಲಿ ಬಳಕೆ ಮಾಡಲಾಗಿದೆ. ಗದೆ, ಆಭರಣ ಸೇರಿದಂತೆ ದುರ್ಯೋಧನ ಪಾತ್ರಕ್ಕಾಗಿ 74 ಕೆಜಿ ತೂಕ ವೇಷವನ್ನು ನಾನು ಧರಿಸಿದ್ದೆ. ಇದರಲ್ಲಿ ಕಾಸ್ಟ್ಯೂಮ್ ತೂಕ 47 ಕೆಜಿ, ಪಂಚೆ 12 ಕೆಜಿಯೇ ಇತ್ತು. ಚಿತ್ರೀಕರಣ ಮುಗಿಸಿ ಸಂಜೆ ಸ್ನಾನ ಮಾಡುವಾಗ ನೋವು ಗೊತ್ತಾಗುತ್ತಿತ್ತು ಎಂದು ಹೇಳಿದರು.

ಪೌರಾಣಿಕ ಅಥವಾ ಐತಿಹಾಸಿಕ ಸಿನಿಮಾಗಳ ಸ್ಕ್ರಿಪ್ಟ್ ಒಂದು ತಿಂಗಳ ಮೊದಲೇ ಕೊಡಬೇಕು ಎಂದು ನಿರ್ದೇಶಕರಿಗೆ ತಿಳಿಸುತ್ತೇನೆ. ಅಂತಹ ಸಿನಿಮಾಗಳಲ್ಲಿ ಹಳೆಗನ್ನಡ, ಸಂಸ್ಕೃತ ಇರುತ್ತೆ. ಅದನ್ನು ಜನರಿಗೆ ಅರ್ಥವಾಗುವ ರೀತಿ ಹೇಳಲು ಸಿದ್ಧತೆ ಮಾಡಿಕೊಳ್ಳಬೇಕು. ದುರ್ಯೋಧನ ಪಾತ್ರದ ಅನೇಕ ಡೈಲಾಗ್‍ಗಳನ್ನು ನನಗೆ ಉಚ್ಚರಿಸಲು ಬರುತ್ತಿರಲಿಲ್ಲ. ಆಗ ನಾಗೇಂದ್ರ ಪ್ರಸಾದ್ ಅವರಿಗೆ ಫೋನ್ ಮಾಡುತ್ತಿದ್ದೆ. ಅವರು ಬೇಜಾರು ಮಾಡಿಕೊಳ್ಳದೇ ಪದಗಳ ಅರ್ಥ, ಉಚ್ಚಾರಣೆ ತಿಳಿಸಿಕೊಡುತ್ತಿದ್ದರು ಎಂದು ಜಾಲೆಂಜಿಂಗ್ ಸ್ಟಾರ್ ನೆನೆದರು.

ಕುರುಕ್ಷೇತ್ರ ಸಿನಿಮಾ ಚಿತ್ರೀಕರಣವನ್ನು ಆಗಸ್ಟ್ 9ರಂದು ಜುಮ್ಮಾ.. ಜುಮ್ಮಾ.. ಹಾಡಿನ ಮೂಲಕ ಆರಂಭಿಸಿದೆವು. ಯಾಕೆಂದರೆ ಹಾಡಿನಿಂದ ಆರಂಭಿಸಿದರೆ ಈ ಪೌರಾಣಿಕ ಸಿನಿಮಾದಲ್ಲಿ ನಟಿಸಲು ಸಾಧ್ಯವಾಗುತ್ತಾ, ಇಲ್ಲವಾ ಎಂಬುದು ಅರ್ಥವಾಗುತ್ತದೆ. ನನಗೆ ಸಾಧ್ಯವಾಗದಿದ್ದರೆ ಬೇರೆಯವರಿಗೆ ಅವಕಾಶ ನೀಡಬೇಕು ಅಂತ ಅಂದುಕೊಂಡಿದ್ದೆ ಎಂದು ತಿಳಿಸಿದರು.

ಭಾರೀ ತೂಕವನ್ನು ಹೊತ್ತುಕೊಂಡು ನಟನೆ ಮಾಡುವುದು ಕಷ್ಟ. ಚಿತ್ರೀಕರಣದ ಸಮಯದಲ್ಲಿ ನಾನ್‍ವೆಜ್ ಊಟ ಮಾಡುತ್ತಿದ್ದೆ. ಹೀಗಾಗಿ ಹೆಚ್ಚಿನ ಭಾರ ಎತ್ತಲು ಬಲ ಬರುತ್ತಿತ್ತು. ನಿತ್ಯವೂ ವರ್ಕೌಟ್ ಮಾಡುತ್ತಿದ್ದೆ ಎಂದು ನೆನೆದರು.

Comments

Leave a Reply

Your email address will not be published. Required fields are marked *