ಎಚ್‍ಡಿಕೆ ಬರೋವರೆಗೂ ಮದುವೆ ಆಗಲ್ಲ ಎಂದಿದ್ದ ಅಭಿಮಾನಿ ಮನೆಗೆ ಭೇಟಿ ಕೊಟ್ರು ಕುಮಾರಸ್ವಾಮಿ

ಮಂಡ್ಯ: ಎಚ್‍ಡಿಕೆ ಬರೋವರೆಗೂ ಮದುವೆ ಆಗಲ್ಲ ಎಂದು ಉಪವಾಸ ಸತ್ಯಾಗ್ರಹ ಮಾಡುತ್ತಿದ್ದ ಅಭಿಮಾನಿ ಮನೆಗೆ ಭೇಟಿ ನೀಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರಸ್ವಾಮಿ ನವ ದಂಪತಿಗಳಿಗೆ ಶುಭ ಹಾರೈಸಿದ್ದಾರೆ.

ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೊಕ್ಕರೆಬೆಳ್ಳೂರಿ ಗ್ರಾಮದ ನಿವಾಸಿ ರವಿ ಎಚ್‍ಡಿಕೆ ಅವರ ಅಭಿಮಾನಿಯಾಗಿದ್ದು, ಡಿಸೆಂಬರ್ 1 ರಂದು ನಡೆಯುವ ತನ್ನ ಮದುವೆಗೆ ಎಚ್‍ಡಿಕೆ ಬರಬೇಕು ಎಂದು ಆಹ್ವಾನ ನೀಡಿದ್ದರು. ಆದರೆ ಕುಮಾರಸ್ವಾಮಿ ಮದುವೆಗೆ ಬರುವ ಭರವಸೆ ಕೊಡದ ಹಿನ್ನೆಲೆಯಲ್ಲಿ ಮದುವೆಯಾಗದೆ ಸತ್ಯಾಗ್ರಹ ನಡೆಸಲು ನಿರ್ಧರಿಸಿದ್ದರು.

ಪ್ರತಿಭಟನೆ ಮಾಹಿತಿ ತಿಳಿದು ರವಿ ಅವರೊಂದಿಗೆ ಮೊಬೈಲ್‍ನಲ್ಲಿ ಮಾತನಾಡಿದ್ದ ಎಚ್‍ಡಿಕೆ ಮದುವೆಯಾದ ನಂತರ ಬರುವುದಾಗಿ ಭರವಸೆ ನೀಡಿದ್ದರು. ಎಚ್‍ಡಿಕೆ ಭರವಸೆ ಹಿನ್ನಲೆಯಲ್ಲಿ ಉಪವಾಸ ಸತ್ಯಾಗ್ರಹ ಬಿಟ್ಟು ಮದುವೆಯಾಗಿದ್ದ ರವಿ ಅವರ ಮನೆಗೆ ಇಂದು ಕುಮಾರಸ್ವಾಮಿ ಭೇಟಿ ನೀಡಿದ್ದರು.

ಈ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಪಕ್ಷದ ನಿಷ್ಠಾವಂತ ಕಾರ್ಯಕರ್ತರು ತಮ್ಮ ಕುಟುಂಬದ ಕಾರ್ಯಕ್ರಮಕ್ಕೆ ಬರಬೇಕೆಂದು ಹಠ ಮಾಡುತ್ತಾರೆ. ಅವರ ಅಭಿಮಾನ, ಪ್ರೀತಿಗೆ ಬೆಲೆಕಟ್ಟಲು ಸಾಧ್ಯವಿಲ್ಲ. ನನ್ನ ಇಕ್ಕಟ್ಟಿನ ಪರಿಸ್ಥಿತಿ. ಒತ್ತಡದ ನಡುವೆ ಕಾರ್ಯಕ್ರಮಕ್ಕೆ ಬರಬೇಕೆಂದು ಹೇಳಿದರೆ ನಾನು ಬೇರೆ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಬೆಳಗ್ಗೆಯಿಂದ ಸಂಜೆವರೆಗೂ ಕಾರ್ಯಕ್ರಮಕ್ಕೆ ಹೋಗಬೇಕಾಗುತ್ತದೆ. ಹಿಂದೊಮ್ಮೆ ದಿನಕ್ಕೆ 53 ಮದುವೆ ಹೋಗಿದ್ದೆ. ಆದರೆ ಈ ಒತ್ತಡದ ನಡುವೆ ನನಗೆ ಕಷ್ಟವಾದರೂ ಬಂದಿದ್ದೇನೆ. ಅದ್ದರಿಂದ ಅಭಿಮಾನಿಗಳು, ಕಾರ್ಯಕರ್ತರು ಒತ್ತಡ ಹಾಕಬೇಡಿ. ಯಾವುದಾದರೂ ಸಮಯ ಬಿಡುವಿದ್ದಾಗ ಮನೆಗೆ ಭೇಟಿ ನೀಡಿ ಶುಭ ಹಾರೈಸುತ್ತೇನೆ ಎಂದು ಅಭಿಮಾನಿಗಳಲ್ಲಿ ಎಚ್‍ಡಿಕೆ ಮನವಿ ಮಾಡಿದರು.

Comments

Leave a Reply

Your email address will not be published. Required fields are marked *