ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ರತ್ನಪ್ರಭಾ ನೇಮಕ

ಬೆಂಗಳೂರು: ರಾಜ್ಯ ಸರ್ಕಾರದ ಅತ್ಯುನ್ನತ ಹುದ್ದೆಗಳು ಮಹಿಳೆಯರ ಪಾಲಾಗಿವೆ. ಡಿಜಿಯಾಗಿ ಕೆಲ ದಿನ ಹಿಂದಷ್ಟೇ ನೀಲಮಣಿ ರಾಜು ಅಧಿಕಾರ ಸ್ವೀಕರಿಸಿದ್ದರು. ಈಗ ಮುಖ್ಯಕಾರ್ಯದರ್ಶಿಯಾಗಿ ರತ್ನಪ್ರಭಾ ನೇಮಕಗೊಂಡಿದ್ದು, ಈ ಕುರಿತು ಸಿಎಂ ಸಿದ್ದರಾಮಯ್ಯ ಅನುಮೋದನೆ ನೀಡಿದ್ದಾರೆ.

ಮುಖ್ಯಕಾರ್ಯದರ್ಶಿ ಸುಭಾಷ್‍ಚಂದ್ರ ಕುಂಠಿಯಾ ನವೆಂಬರ್ 30 ರಂದು ನಿವೃತ್ತಿಯಾಗಲಿದ್ದು, ಅಂದೇ ರತ್ನಪ್ರಭಾ ಅವರ ನೇಮಕ ಕುರಿತ ಪ್ರಕಟಣೆ ಹೊರಬಿಳುವ ಸಾಧ್ಯತೆ ಇದೆ. ರಾಜ್ಯದ ಮೂರನೇ ಮಹಿಳಾ ಮುಖ್ಯಕಾರ್ಯದರ್ಶಿಯಾಗಿ ರತ್ನಪ್ರಭಾ ಅಧಿಕಾರ ವಹಿಸಲಿದ್ದಾರೆ. 2000ರಲ್ಲಿ ತೆರೆಸಾ ಭಟ್ಟಾಚಾರ್ಯ, 2006ರಲ್ಲಿ ಮಾಲತಿದಾಸ್ ಮುಖ್ಯಕಾರ್ಯದರ್ಶಿಯಾಗಿದ್ದರು. ಇನ್ನು ಸರ್ಕಾರದ ಹೆಚ್ಚುವರಿ ಮುಖ್ಯಕಾರ್ಯದರ್ಶಿಯಾಗಿ ವಿಜಯ ಭಾಸ್ಕರ್ ನೇಮಕವಾಗಿದೆ.

ರತ್ನಪ್ರಭಾ ಯಾರು? 1981ರ ಬ್ಯಾಚ್‍ನ ಕರ್ನಾಟಕ ಕೇಡರ್ ಐಎಎಸ್ ಅಧಿಕಾರಿ ರತ್ನಪ್ರಭಾ ಅವರ ತಾಯಿ ಕಾರ್ಕಳ ಮೂಲದವರು, ತಂದೆ ಹೈದ್ರಬಾದ್‍ನವರು. ಪತಿ ಆಂಧ್ರಪ್ರದೇಶ ಕೇಡರ್‍ನ ಐಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. 1983 – ಬೀದರ್ ಉಪವಿಭಾಗಾಧಿಕಾರಿಯಾಗಿ ಸೇವೆ ಆರಂಭ ಮಾಡಿದ ಇವರು ಚಿಕ್ಕಮಗಳೂರು, ಬೆಂಗಳೂರು ವಿಶೇಷ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ.

ಅಲ್ಲದೇ ಸೆನ್ಸಾರ್ ಬೋರ್ಡ್‍ನ ಹೈದ್ರಬಾದ್ ಪ್ರಾದೇಶಿಕ ಅಧಿಕಾರಿಯಾಗಿ ಸೇವೆ ಸಲ್ಲಿಸಿರುವ ರತ್ನಪ್ರಭಾ ಬೀದರ್ ಜಿಲ್ಲಾಧಿಕಾರಿಯಾಗಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕಿ, ಸಹಕಾರ ಇಲಾಖೆ ಹೆಚ್ಚುವರಿ ರಿಜಿಸ್ಟ್ರರ್, ಗುಲ್ಬರ್ಗಾ ಪ್ರಾದೇಶಿಕ ಆಯುಕ್ತೆ, ಆಂಧ್ರ ಪ್ರದೇಶ ಸರ್ಕಾರದಲ್ಲಿ ಐಟಿಬಿಟಿ, ಕಂದಾಯ, ಸಾರಿಗೆ ಇಲಾಖೆಯಲ್ಲಿ ಪ್ರಧಾನ ಕಾರ್ಯದರ್ಶಿ ವಾಣಿಜ್ಯ & ಕೈಗಾರಿಕ ಇಲಾಖೆ ಅಪರ ಮುಖ್ಯಕಾರ್ಯದರ್ಶಿಯಾಗಿ ಹಲವು ಅತ್ಯುನ್ನತ ಹುದ್ದೆಗಳಳನ್ನು ನಿರ್ವಹಿಸಿದ್ದಾರೆ.

 

Comments

Leave a Reply

Your email address will not be published. Required fields are marked *