ನಿಂತಿದ್ದ ಲಾರಿಗೆ KSRTC ಬಸ್ ಡಿಕ್ಕಿ- ವೃದ್ಧ ದಂಪತಿ ಸ್ಥಳದಲ್ಲೇ ದುರ್ಮರಣ

ಬೆಂಗಳೂರು: ನಿಂತಿದ್ದ ಲಾರಿಗೆ ಕೆಎಸ್‍ಆರ್ ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ವೃದ್ಧ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿದ್ದ ಘಟನೆ ಬೆಂಗಳೂರು ಹೊರವಲಯ ನೆಲಮಂಗಲದ ತಿಪ್ಪಗೊಂಡನಹಳ್ಳಿಯ ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ನಡೆದಿದೆ.

ಹೆದ್ದಾರಿ ಸವಾರರು ಮೃತರ ಬಳಿಯಿದ್ದ ಹಣ ಹಾಗೂ ಒಡವೆ ಕದ್ದು ಅಮಾನವೀಯತೆ ಪ್ರದರ್ಶಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯಿಂದ ಬೆಂಗಳೂರಿಗೆ ಬರುತ್ತಿದ್ದ ಕೆಎಸ್‍ಆರ್ ಟಿಸಿ ಬಸ್‍ಗೆ ವೃದ್ಧ ದಂಪತಿ ತರೀಕೆರೆಯಲ್ಲಿ ಬಸ್ ಹತ್ತಿದ್ದರು. ಇವರು ತರೀಕೆರೆ ಮೂಲದವರು ಇರಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ.

ಘಟನೆಯ ನಂತರ ಬಸ್ ಚಾಲಕ ಕರೀಗೌಡ ಸ್ಥಳದಿಂದ ಪರಾರಿಯಾಗಿದ್ದಾರೆ. ನಿರ್ವಾಹಕ ಚಂದ್ರಾನಾಯಕ್ ಸೇರಿದಂತೆ ಇತರೆ 5 ಜನ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ನೆಲಮಂಗಲ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಈ ಪ್ರಕರಣದಲ್ಲಿ ಹೆದ್ದಾರಿಯ ಸವಾರರು ಅಮಾನವಿಯತೆಗೆ ಸಾಕ್ಷಿಯಾಗಿದ್ದಾರೆ. ಘಟನೆಯ ವೇಳೆ ಮೃತರು ಬಸ್‍ನಿಂದ ಹೊರಗೆ ಬಿದ್ದಿದ್ದನ್ನು ಗಮನಿಸಿದ ಹೆದ್ದಾರಿ ಸವಾರರು ನೆರವು ನೀಡುವ ಬದಲು ಮೃತರ ಬಳಿಯಿದ್ದ ಹಣ ಒಡವೆ ಪರ್ಸ್ ಅನ್ನು ಕದ್ದಿದ್ದಾರೆ. ಕದಿಯುವ ಭರದಲ್ಲಿ ಮೃತ ದಂಪತಿ ಬಳಿ ಇರುವ ಗುರುತಿನ ಚೀಟಿಯನ್ನ ಸಹ ದುಷ್ಕರ್ಮಿಗಳು ಕದ್ದಿದ್ದಾರೆ. ಹೀಗಾಗಿ ಮೃತರ ಗುರುತು ಪತ್ತೆ ಮಾಡಲು ಪೊಲೀಸರಿಗೆ ಕಷ್ಟವಾಗಿದೆ.

ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ನೆಲಮಂಗಲ ಸಂಚಾರಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Comments

Leave a Reply

Your email address will not be published. Required fields are marked *