ಕೆಎಸ್‍ಆರ್‍ಟಿಸಿ, ಬಿಎಂಟಿಸಿ ನೌಕರರಿಂದ ಅಹೋರಾತ್ರಿ ಮುಷ್ಕರ

ಬೆಂಗಳೂರು: ವಿವಿಧ ಬೇಡಿಕೆಗಳನ್ನ ಈಡೇರಿಸುವಂತೆ ಆಗ್ರಹಿಸಿ ಕೆಎಸ್‍ಆರ್‍ಟಿಸಿ ಮತ್ತು ಬಿಎಂಟಿಸಿ ನೌಕರರು ಅಹೋರಾತ್ರಿ ಅನಿರ್ಧಿಷ್ಠಾವಧಿ ಮುಷ್ಕರ ಆರಂಭಿಸಿದ್ದಾರೆ.

ಈ ಕುರಿತು ಮಾತನಾಡಿದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಫೆಡರೇಶನ್ ಪ್ರಧಾನ ಕಾರ್ಯದರ್ಶಿ ಹೆಚ್‍ಎಸ್ ಮಂಜುನಾಥ್, ಮೂವತ್ತು ದಿನಗಳ ಒಳಗಾಗಿ ನಮ್ಮೆಲ್ಲಾ ಬೇಡಿಕೆಗಳನ್ನು ಈಡೇರಿಸುವುದಾಗಿ ಹೇಳಿ ಮುಖ್ಯಮಂತ್ರಿಗಳು ಮತ್ತು ಸಾರಿಗೆ ಸಚಿವರು ನಮ್ಮ ಹಿಂದಿನ ಮುಷ್ಕರವನ್ನು ಅಂತ್ಯಗೊಳಿಸಿದ್ದರು. ಆದರೆ ಈವರೆಗೂ ಯಾವುದೇ ರೀತಿಯ ಬೇಡಿಕೆಗಳನ್ನು ಈಡೇರಿಸಿಲ್ಲ. ಶೇ.12.5 ವೇತನ ಹೆಚ್ಚಳ ಮಾಡಲಾಗಿತ್ತು. ಇದರ ಹೊರತು ಬೇರಾವ ಬೇಡಿಕೆಯನ್ನೂ ಈಡೇರಿಸಿಲ್ಲ ಎಂದು ಹೇಳಿದ್ರು.

ನಾವು ಒಟ್ಟು 52 ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಮುಷ್ಕರ ಹೂಡಿದ್ದೆವು. ಒಟ್ಟು 1600 ಸಿಬ್ಬಂದಿಯನ್ನು ವರ್ಗಾವಣೆ ಮಾಡಿ 2016ರ ಸೆಪ್ಟೆಂಬರ್ ನಲ್ಲಿ ಆದೇಶ ಹೊರಡಿಸಲಾಗಿತ್ತು. ಪುತ್ತೂರು ವಿಭಾಗದಿಂದ 250 ಜನರನ್ನು ಎಲ್ಲಿಗೆ ವರ್ಗಾವಣೆಯಾಗಿದೆಯೋ ಅಲ್ಲಿಗೆ ಕಳುಹಿಸಿಕೊಟ್ಟಿಲ್ಲ. ನಾಲ್ಕು ನಿಗಮಗಳಲ್ಲಿ ಬಿಎಂಟಿಸಿ ನೌಕರರಿಗೆ 2014-15ರ ಸಾಲಿನ ಎರಡು ವರ್ಷದ ಬೋನಸ್ ಹಣವನ್ನು ಕೊಟ್ಟಿಲ್ಲ. ಇನ್ನೂ 2016-17ನೇ ಸಾಲಿನ ಬೋನಸ್ ಹಣವನ್ನು ಘೋಷಣೆ ಮಾಡಿಲ್ಲ. ಏಪ್ರಿಲ್ ನಲ್ಲೇ ಘೋಷಣೆ ಮಾಡಬೇಕಿತ್ತು, ಆದರೆ ಮಾಡಿಲ್ಲ ಎಂದರು.

ಸರ್ಕಾರದ ಸಚಿವರ ಪ್ರಾಮಾಣಿಕ ಪ್ರಯತ್ನಕ್ಕೂ ಸಾರಿಗೆ ಇಲಾಖೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಡಿಪೋಗಳಲ್ಲಿ ವಿಪರೀತ ಕಿರುಕುಳ ನೀಡಲಾಗುತ್ತಿದ್ದು, ನಿಯಮಾನುಸಾರ ಕೆಲಸ ಮಾಡುತ್ತಿಲ್ಲ. ನೌಕರರ ಕೆಲಸದ ಅವಧಿಯನ್ನ ಹೆಚ್ಚಳ ಮಾಡಲಾಗಿದೆ. ಮಂತ್ರಿಗಳು ಮಧ್ಯಪ್ರವೇಶಿಸಿ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು. ಬೇಡಿಕೆ ಈಡೇರುವವರೆಗೂ ಧರಣಿ ಮುಂದುವರೆಸಲಿದ್ದೇವೆ ಎಂದು ಹೇಳಿದರು.

Comments

Leave a Reply

Your email address will not be published. Required fields are marked *