ಮೇಕೆದಾಟು ಪಾದಯಾತ್ರೆ ನೀರಿಗಾಗಿ ಅಲ್ಲ, ಬದಲಿಗೆ ಡಿಕೆಶಿ ಸಿಎಂ ಆಗುವ ಸಲುವಾಗಿ : ಈಶ್ವರಪ್ಪ

ಶಿವಮೊಗ್ಗ : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ನಡೆಸುತ್ತಿರುವ ಮೇಕೆದಾಟು ಪಾದಯಾತ್ರೆ ನೀರಿಗಾಗಿ ಅಲ್ಲ, ಬದಲಿಗೆ ಡಿಕೆಶಿ ಸಿಎಂ ಆಗುವ ಸಲುವಾಗಿ ನಡೆಸುತ್ತಿರುವ ಪಾದಯಾತ್ರೆ. ಡಿಕೆಶಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಪಕ್ಕಕ್ಕೆ ಸರಿಸಿ ಸಿಎಂ ಆಗಲು ಹೊರಟಿದ್ದಾರೆ. ಈ ಮೇಕೆದಾಟು ಪಾದಯಾತ್ರೆ ಮೂಲಕ ರಾಜ್ಯದ ಜನತೆಗೆ ಕೋವಿಡ್ ಹಚ್ಚುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಡಿಕೆಶಿ ವಿರುದ್ಧ ಕಿಡಿಕಾರಿದ್ದಾರೆ.

ಶಿವಮೊಗ್ಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮಗೆ ಯಾವುದೇ ಪಕ್ಷವಿರಲಿ, ಅವರ ಆರೋಗ್ಯ ಮುಖ್ಯ. ಈ ಒಂದೇ ಉದ್ದೇಶದಿಂದ ಆರೋಗ್ಯ ಚೆನ್ನಾಗಿ ಇಟ್ಟುಕೊಳ್ಳಿ ಎಂದು ಅವರಿಗೆ ಹೇಳುತ್ತಿದ್ದೇವೆ. ಆದರೆ ಕಾಂಗ್ರೆಸ್‍ನವರಿಗೆ ರಾಜಕೀಯವೇ ಮುಖ್ಯವಾಗಿದೆ. ಪಾದಯಾತ್ರೆಗೆ ನಟ ಶಿವರಾಜ್ ಕುಮಾರ್ ಹೋಗದೆ ಇರುವುದು ಸಂತೋಷ ತಂದಿದೆ ಎಂದಿದ್ದಾರೆ.

 

ಪಾದಯಾತ್ರೆ ಆರಂಭಕ್ಕೂ ಮೊದಲು ಡಿಕೆಶಿ ಕೋವಿಡ್ ನಿಯಮ ಪಾಲನೆ ಮಾಡುತ್ತೇವೆ. ಒಂದು ಲಕ್ಷ ಮಾಸ್ಕ್ ವಿತರಣೆ ಮಾಡುತ್ತೇವೆ, ಸ್ಯಾನಿಟೈಸರ್ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುತ್ತೇವೆ ಎಂದು ಹೇಳಿದ್ದರು. ಆದರೆ ಡಿಕೆಶಿಯೇ ಮಾಸ್ಕ್ ಧರಿಸಿಲ್ಲ. ಸಾಮಾಜಿಕ ಅಂತರ, ಸ್ಯಾನಿಟೈಸರ್ ಮಾತು ಇನ್ನೇಲ್ಲಿ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‍ಗೆ ಮಾನ-ಮರ್ಯಾದೆ ಇಲ್ಲ, ಸುಳ್ಳಿನಿಂದ ಜಾಸ್ತಿ ದಿನ ರಾಜಕೀಯ ನಡೆಯಲ್ಲ : ಎಚ್.ಡಿ.ರೇವಣ್ಣ

ಡಿಕೆಶಿ ಅವರ ಕೋವಿಡ್  ಟೆಸ್ಟ್‌ಗೆ  ತೆರಳಿದ್ದ ಅಧಿಕಾರಿಗಳನ್ನು ಬೈಯುತ್ತಾರೆ. ಇದು ಒಂದು ರೀತಿ ದಾದಾಗಿರಿ, ಗೂಂಡಾಗಿರಿ ಆಗಿದೆ. ಗೂಂಡಾಗಿರಿಯನ್ನು ಡಿ.ಕೆ. ಶಿವಕುಮಾರ್ ಮಾಡುತ್ತಿದ್ದರು ಅಂತ ಮುಂಚೆ ಕೇಳುತ್ತಿದ್ದೆ, ಈಗ ನೋಡಿದೆ. ಈಗಲೂ ಕಾಲ ಮಿಂಚಿಲ್ಲ. ಮೇಕೆದಾಟು ಪಾದಯಾತ್ರೆಯನ್ನು ಕೋವಿಡ್ ಮುಗಿದ ಮೇಲೆ ಲಕ್ಷಗಟ್ಟಲೇ ಜನ ಸೇರಿಸಿ ಮಾಡಿ, ನಾವು ಬೇಡ ಅನ್ನೋದಿಲ್ಲ. ಈಗ ನಿಮ್ಮ ಶಕ್ತಿ ಪ್ರದರ್ಶನ ಮಾಡಲು ಹೋಗಬೇಡಿ ಎಂದಿದ್ದಾರೆ.

ಡಿ.ಕೆ.ಶಿವಕುಮಾರ್ ಮೊದಲು ತಾನು ಯಾಕೆ ತಿಹಾರ್ ಜೈಲಿಗೆ ಹೋಗಿ ಬಂದೆ ಎಂಬುದನ್ನು ಸ್ಪಷ್ಟಪಡಿಸಲಿ. ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದರಿಂದ ಜೈಲಿಗೆ ಹೋಗಿದ್ದೀರಿ. ನೀವು ನಮ್ಮ ಪ್ಲಾನ್‍ನಿಂದ ಜೈಲಿಗೆ ಹೋಗಿಲ್ಲ. ಅದರ ಅವಶ್ಯಕತೆಯೂ ಇಲ್ಲ. ನಿಮ್ಮನ್ನು ಜೈಲಿಗೆ ಹಾಕುವ ಪ್ರಯತ್ನವನ್ನು ನಾವು ಮಾಡಿಲ್ಲ. ನಿಮ್ಮ ಅಕೌಂಟ್ಸ್ ಸರಿ ಇದೆಯೇ ಎಂದು ರಾಜ್ಯದ ಜನತೆ ಮುಂದೆ ಇಡಿ ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಡಿಕೆಶಿಗೆ ಕೊರೊನಾ ಅಂಟಿಸಲು ಸೋಂಕಿತ ವ್ಯಕ್ತಿಯನ್ನು ಕಳುಹಿಸಿದ್ದಾರೆ: ಡಿ.ಕೆ ಸುರೇಶ್


Eshwarappa, DK Shivakumar, Mekedatu padayatra, Shivamogga

Comments

Leave a Reply

Your email address will not be published. Required fields are marked *