ಜಮೀರ್ ನನ್ನು ಲಾಕಪ್‍ನಲ್ಲಿಟ್ಟರೆ ಐಎಂಎ ಲೂಟಿ ಬಯಲಾಗುತ್ತೆ: ಈಶ್ವರಪ್ಪ

ಚಿತ್ರದುರ್ಗ: ಪಿಕ್ ಪಾಕೆಟ್ ಮಾಡಿದವರನ್ನು ಒದ್ದು ವಸೂಲಿ ಮಾಡಿದಂತೆ ಸಚಿವ ಜಮೀರ್ ಅಹ್ಮದ್ ಖಾನ್‍ನನ್ನು ಪೊಲೀಸರು ಲಾಕಪ್‍ನಲ್ಲಿಟ್ಟರೆ ಐಎಂಎ ಲೂಟಿ ಬಯಲಾಗಲಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್‍ಐಟಿ ಮೂಲಕ ತನಿಖೆ ನಡೆಸಿದರೆ ಸತ್ಯ ಹೊರ ಬರುವುದಿಲ್ಲ. ಜಮೀರ್ ಅಹ್ಮದ್‍ನನ್ನು ಕ್ಯಾಬಿನೆಟ್‍ನಿಂದ ಕೈಬಿಟ್ಟು ಸಮಗ್ರ ತನಿಖೆ ನಡೆಸಬೇಕು. ಆಗ ಮಾತ್ರ ಸತ್ಯ ಹೊರ ಬರಲಿದೆ. ಈ ಕುರಿತು ಮುಖ್ಯಮಂತ್ರಿಗಳು ಕ್ರಮ ಕೈಗೊಳ್ಳಬೇಕು ಎಂದು ಈಶ್ವರಪ್ಪ ಒತ್ತಾಯಿಸಿದ್ದಾರೆ.

ಹಿಂದುಳಿದ, ದಲಿತ ನಾಯಕರಿಗೆ ಸಿದ್ದರಾಮಯ್ಯರಿಂದ ಅನ್ಯಾಯ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದುಳಿದವರು, ದಲಿತರನ್ನು ಬಹಳ ಸಲ ಮೋಸ ಮಾಡಲು ಸಾದ್ಯವಿಲ್ಲ. ಹೆಚ್.ವಿಶ್ವನಾಥ್, ಮುಕಡಪ್ಪ, ಶ್ರೀನಿವಾಸ್ ಅವರು ಸಿದ್ದರಾಮಯ್ಯ ಜೊತೆಗಿದ್ದರು. ಹಿಂದುಳಿದ, ದಲಿತ ನಾಯಕರಿಗೆ ಮೋಸ ಮಾಡಿದರು. ಮತ್ತೆ ಹಿಂದುಳಿದ, ದಲಿತ ಅಲ್ಪಸಂಖ್ಯಾತ ಕಾರ್ಡ್ ಮೂಲಕ ಅಧಿಕಾರ ಹಿಡಿಯುವುದು ಸಫಲವಾಗುವುದಿಲ್ಲ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮದ್ಯೆ ಧ್ವೇಷ ಸಾಧನೆಯಿಂದ ಮೈತ್ರಿಗೆ ಅರ್ಥವಿಲ್ಲದಂತಾಗಿದೆ ಎಂದು ಅವರೇ ಹೇಳುತ್ತಿದ್ದಾರೆ ಎಂದು ಈಶ್ವರಪ್ಪ ಕುಟುಕಿದರು.

ಮೈತ್ರಿ ಸರ್ಕಾರದ ಹೆಸರಿನಲ್ಲಿ ರಾಜ್ಯದ ಜನರಿಗೆ ದ್ರೋಹ ಮಾಡಬಾರದು, ರಾಜ್ಯದಲ್ಲಿ ಮಳೆ ಇಲ್ಲದೆ ಭೀಕರ ಬರಗಾಲವಿದೆ. ರಾಹುಲ್ ಗಾಂಧಿ, ದೇವೇಗೌಡರು ರಾಜ್ಯ ಅಭಿವೃದ್ಧಿ ಮಾಡಲೇ ಇಲ್ಲ. ರಾಜಿನಾಮೆ ಕೊಟ್ಟು ಮನೆಗೆ ಹೋಗಲಿ. ದೇಶದ ಜನ ಮೋದಿ ಅವರನ್ನು ಮೆಚ್ಚಿ ಮತ ಕೊಟ್ಟಿದ್ದಾರೆ. ಆದರೆ, ಇದನ್ನೇ ಇಟ್ಟುಕೊಂಡು ಮೋದಿಗೆ ಮತ ಹಾಕಿದ್ದೀರಿ ನಮ್ಮ ಬಳಿ ಕೆಲಸ ಕೇಳುತ್ತೀರಿ ಎನ್ನುವುದರಲ್ಲಿ ಅರ್ಥವಿಲ್ಲ ಎಂದು ಹರಿಹಾಯ್ದರು.

ಮುಖ್ಯಮಂತ್ರಿಗಳು ಅಮೆರಿಕಾ ಹೋಗಿ ಫೈವ್ ಸ್ಟಾರ್ ಹೋಟೆಲ್‍ನಲ್ಲಿರುವುದಕ್ಕೆ ನನ್ನ ಆಕ್ಷೇಪವಿಲ್ಲ. ಮುಖ್ಯಮಂತ್ರಿ ಸ್ಥಾನದ ಜವಾಬ್ದಾರಿಯನ್ನರಿತು ಕೆಲಸ ಮಾಡಲಿ. ರಾಜ್ಯದ ಜನರ ನೇತಾರ, ಅಭಿವೃದ್ಧಿ ಕಾಪಾಡುವ ತಂದೆ ನೀವು. ಅಮೆರಿಕಾಗೆ ಹೋಗಿ ಜನರಿಗೆ ಏನು ಅನುಕೂಲ ಮಾಡಲು ಸಾಧ್ಯ? ಮೊದಲು ಸಂಕಷ್ಟದಲ್ಲಿರುವ ಜನರತ್ತ ಗಮನಹರಿಸಿ ಎಂದರು.

ಮೈತ್ರಿ ಸರ್ಕಾರ ಬೀಳಿಸುವ ಪ್ರಶ್ನೆಯೇ ಇಲ್ಲ. ಮೈತ್ರಿ ಸರ್ಕಾರದವರು ಅವರವರೇ ಬಡಿದಾಡುತ್ತಿದ್ದಾರೆ. ಕಾಂಗ್ರೆಸ್‍ನವರ ಮೇಲೆ ಜೆಡಿಎಸ್, ಜೆಡಿಎಸ್ ಮೇಲೆ ಕಾಂಗ್ರೆಸ್, ಅಲ್ಲದೆ, ಕಾಂಗ್ರೆಸ್ ಒಳಗೆ ಕಾಂಗ್ರೆಸ್, ಜೆಡಿಎಸ್ ಒಳಗೆ ಜೆಡಿಎಸ್‍ನವರು ಬಡಿದಾಡುತ್ತಿದ್ದಾರೆ. ಕಾಂಗ್ರೆಸ್ ಅತೃಪ್ತರು ಬಿಜೆಪಿ ಸೇರುವ ಬಗ್ಗೆ ಹೇಳಿದಾಗ ನಾವು ಚರ್ಚಿಸಿ ತೀರ್ಮಾನಿಸುತ್ತೇವೆ ಎಂದು ಟೀಕಿಸಿದರು.

Comments

Leave a Reply

Your email address will not be published. Required fields are marked *