ಅಮೆರಿಕದಲ್ಲಿ ಪ್ರವಾಹ ಸಂತ್ರಸ್ತರಿಗೆ ಸಾಂತ್ವನ, ರಾಜ್ಯದಲ್ಲಿರುವವರಿಗೆ ಹೇಳಲ್ಲ- ದಿನೇಶ್ ಗುಂಡೂರಾವ್

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕದ ಹ್ಯೂಸ್ಟನ್ ಕಾರ್ಯಕ್ರಮಕ್ಕೆ ಹೋಗುತ್ತಾರೆ. ಅಲ್ಲಿನ ಪ್ರವಾಹ ಸಂತ್ರಸ್ತರಿಗೆ ಸಾಂತ್ವನ ಹೇಳುತ್ತಾರೆ. ಆದರೆ ನಮ್ಮ ರಾಜ್ಯದ ಪ್ರವಾಹ ಸಂತ್ರಸ್ತರ ಬಗ್ಗೆ ಮಾತನಾಡಲಿಲ್ಲ, ರಾಜ್ಯಕ್ಕೆ ಬರಲಿಲ್ಲ, ಸಂತ್ರಸ್ತರಿಗೆ ಸಾಂತ್ವನ ಹೇಳಲಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರವಾಹದ ಎಲ್ಲ ಜಿಲ್ಲೆಗಳಲ್ಲಿ ಬಿಜೆಪಿ ಸಂಸದರೇ ಇದ್ದಾರೆ ಡಿಸಿಎಂ ಲಕ್ಷ್ಮಣ ಸವದಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಎಲ್ಲರೂ ಇದ್ದಾರೆ, ಏನು ಮಾಡುತ್ತಿದ್ದಾರೆ. ಜನರ ಪ್ರತಿನಿಧಿಯಾಗಲು ಅವರು ಲಾಯಕ್ ಇಲ್ಲ. ಜನ ವಿರೋಧಿ ನೀತಿಯನ್ನೇ ಬಿಜೆಪಿ ಒಳಗೊಂಡಿದೆ. ಹೀಗಾಗಿಯೇ ನಾಳೆ ಪ್ರವಾಹ ಸಂತ್ರಸ್ತರ ವಿಚಾರವಾಗಿ ಬೆಳಗಾವಿಯಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.

ಅನರ್ಹ ಶಾಸಕರ ವಿರುದ್ಧ ನಮ್ಮ ವಕೀಲರು ಸಮರ್ಥವಾಗಿ ವಾದ ಮಂಡಿಸಲಿದ್ದು, ಶಾಸಕರನ್ನು ಅನರ್ಹಗೊಳಿಸಿದ ಸ್ಪೀಕರ್ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿಯಲಿದೆ. ಸುಪ್ರೀಂ ಕೋರ್ಟ್ ವಿಚಾರಣೆಯನ್ನು ಮುಂದೂಡಿದೆ. ಗುರುವಾರ ನಮ್ಮ ವಕೀಲರು ವಾದ ಮಂಡಿಸಲಿದ್ದಾರೆ. ನಾವು ಕೇವಿಯೆಟ್ ಸಲ್ಲಿಸಿದ್ದೆವು. ಹೀಗಾಗಿ ನಮ್ಮ ವಕೀಲರು ಸ್ಪಷ್ಟವಾಗಿ ವಾದ ಮಾಡಲಿದ್ದಾರೆ. ಅನರ್ಹ ಶಾಸಕರು ಪಕ್ಷಾಂತರ ಕಾಯ್ದೆ ಉಲ್ಲಂಘನೆ ಮಾಡಿದ್ದಾರೆ. ಕಾಯ್ದೆಯ ನಿಯಮ ಅನುಷ್ಠಾನವಾಗಬೇಕು ಎಂದು ತಿಳಿಸಿದ್ದಾರೆ.

ಉತ್ತಮ ಉದ್ದೇಶದಿಂದ ರಾಜೀವ್ ಗಾಂಧಿ ಈ ಕಾಯ್ದೆಯನ್ನು ಜಾರಿಗೆ ತಂದಿದ್ದರು. ಇದನ್ನು ಸ್ಪೀಕರ್ ಎತ್ತಿಹಿಡಿದಿದ್ದಾರೆ. ಜನ ಕೂಡ ಸ್ಪೀಕರ್ ಆದೇಶವನ್ನೇ ಬಯಸಿದ್ದರು. ಹೀಗಾಗಿ ಕೋರ್ಟ್ ಸ್ಪೀಕರ್ ಆದೇಶವನ್ನು ಎತ್ತಿಹಿಡಿಯಲಿದೆ. ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಚುನಾವಣಾ ಆಯೋಗ ಹೇಳಿರಬಹುದು. ಆದರೆ ಪ್ರಕರಣಕ್ಕೂ, ಆಯೋಗಕ್ಕೂ ಸಂಬಂಧವಿಲ್ಲ. ಆಯೋಗ ಮಧ್ಯಪ್ರವೇಶ ಮಾಡಿದ್ದು ಸರಿಯಲ್ಲ ಎಂದರು.

ನಾವು ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಈ ಕುರಿತು ಇಂದು ಸಭೆ ಕರೆದಿದ್ದೇವೆ. ನಾಳೆ ಬೆಳಗಾವಿಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಅದಾದ ಬಳಿಕ ಅಭ್ಯರ್ಥಿ ಆಯ್ಕೆ ನಡೆಸುತ್ತೇವೆ ಎಂದು ಮಾಹಿತಿ ನೀಡಿದರು.

ಮೇಯರ್ ಚುನಾವಣೆಗೂ ನಾವು ಅಭ್ಯರ್ಥಿ ಹಾಕುತ್ತೇವೆ. ಗೆಲ್ಲುವ ವಿಶ್ವಾಸವಿದೆ, ಬಿಜೆಪಿ ಚುನಾವಣೆ ಮುಂದೂಡುವ ಪ್ರಯತ್ನ ನಡೆಸುತ್ತಿದೆ. ನಾವು ಮೇಯರ್ ಚುನಾವಣೆ ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಅಭ್ಯರ್ಥಿ ಯಾರು ಎಂಬುದನ್ನು ಶೀಘ್ರದಲ್ಲೇ ನಿರ್ಧರಿಸುತ್ತೇವೆ ಎಂದು ತಿಳಿಸಿದರು.

Comments

Leave a Reply

Your email address will not be published. Required fields are marked *