ಐಟಿ ಇಲಾಖೆ ಎಲ್ಲಾ ಬಿಟ್ಟು ನಿಂತಿದೆ: ದಿನೇಶ್ ಗುಂಡೂರಾವ್

– ಐಟಿ ಬಿಜೆಪಿ ಡಿಪಾರ್ಟ್ಮೆಂಟ್

ಬೆಂಗಳೂರು: ಆದಾಯ ತರಿಗೆ (ಐಟಿ) ಇಲಾಖೆ ಎಲ್ಲಾ ಬಿಟ್ಟು ನಿಂತಿದೆ. ಅದು ಬಿಜೆಪಿಯ ಡಿಪಾಟ್ರ್ಮೆಂಟ್ ಆಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.

ನಗರದ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಐಟಿ ಅಧಿಕಾರಿಗಳು ಕಾಂಗ್ರೆಸ್-ಜೆಡಿಎಸ್ ಬೆಂಬಲಿಗರು ಹಾಗೂ ನಾಯಕರಲ್ಲಿ ಭಯ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ. ಚುನಾವಣಾ ಸಂದರ್ಭದಲ್ಲಿ ತೊಂದರೆ ಕೊಟ್ಟು ಪ್ರಚಾರಕ್ಕೆ ಅಸ್ತವ್ಯಸ್ತ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರವಾಗಿ ಗೃಹ ಸಚಿವ ಎಂ.ಬಿ.ಪಾಟೀಲ್ ಅವರು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಪತ್ರ ಬರೆದಿಲ್ಲ. ಬಿಜೆಪಿಯವರು ನಕಲಿ ಪತ್ರ ಸೃಷ್ಟಿ ಮಾಡಿದ್ದಾರೆ. ಈ ಹಿಂದೆಯೇ ಬಿಜೆಪಿ ತೋರಿಸುತ್ತಿರುವ ಪತ್ರ ನಕಲಿ ಎಂದು ಸಾಬೀತಾಗಿದೆ. ಚುನಾವಣಾ ಹಿನ್ನೆಲೆಯಲ್ಲಿ ಪತ್ರವನ್ನು ಮತ್ತೊಮ್ಮೆ ಬಹಿರಂಗಗೊಳಿಸಿದ್ದಾರೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.

ಬಿಜೆಪಿ ಆರೋಪಿಸುತ್ತಿರುವ ಪತ್ರದಲ್ಲಿ ಸಂಪೂರ್ಣ ಅಕ್ಷರ ದೋಷಗಳಿವೆ. ಇದೊಂದು ರಾಜಕೀಯ ವ್ಯಭಿಚಾರ. ಮಾನ ಮರ್ಯಾದೆ ನೈತಿಕತೆ ಇದ್ದರೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕ್ಷಮೆ ಕೇಳಬೇಕು. ಅಷ್ಟೇ ಅಲ್ಲದೆ ಪತ್ರದ ಕುರಿತಾಗಿ ನೀಡಿದ ಹೇಳಿಕೆಯನ್ನು ವಾಪಸ್ ಪಡೆದುಕೊಳ್ಳಬೇಕು ಎಂದ ಅವರು, ಸುಳ್ಳು ಆರೋಪ ಮಾಡಿದವರ ವಿರುದ್ಧ ಕ್ರಿಮಿನಲ್ ದೂರು ನೀಡಲು ಪಕ್ಷದಲ್ಲಿ ಚಿಂತನೆ ನಡೆದಿದೆ ಎಂದರು.

ಪ್ರಧಾನಿ ಮೋದಿ ವಿರೋಧಿಗಳಿಗೆ ತಾಯಿ ಗಂಡರು ಎಂಬ ಬಿಜೆಪಿ ಶಾಸಕ ಸಿ.ಟಿ.ರವಿ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ದಿನೇಶ್ ಗುಂಡೂರಾವ್ ಅವರು, ಇದೇನಾ ಬಿಜೆಪಿ ಪಕ್ಷದ ಸಂಸ್ಕೃತಿ? ಸಂಸ್ಕೃತಿ ಇರುವವರು ಈ ರೀತಿ ಮಾತನಾಡುವುದಿಲ್ಲ. ರಾಜಕೀಯ ಚರ್ಚೆಗಳನ್ನು ಕೆಳಮಟ್ಟಕ್ಕೆ ಇಳಿಸುತ್ತಿದ್ದಾರೆ. ಈ ಹೇಳಿಕೆ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುತ್ತದೆ. ಶಾಸಕ ಸಿ.ಟಿ.ರವಿ, ಕೇಂದ್ರ ಸಚಿವ ಅನಂತ್‍ಕುಮಾರ ಹೆಗ್ಡೆ, ಸಂಸದರಾದ ನಳಿನ್ ಕುಮಾರ್ ಕಟೀಲ್ ಹಾಗೂ ಶೋಭಾ ಕರಂದ್ಲಾಜೆ ಎಲ್ಲಾ ಒಂದೇ ಸಂಸ್ಕೃತಿಯವರು. ಅವರ ಸಾಲಿಗೆ ಈಗ ಹೊಸದಾಗಿ ತೇಜಸ್ವಿ ಸೂರ್ಯ ಸೇರ್ಪಡೆಯಾಗುತ್ತಿದ್ದಾರೆ ಎಂದರು.

ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಹಾಗೂ ಬಿ.ಎಸ್.ಯಡಿಯೂರಪ್ಪ ಅವರ ಒಳ ಜಗಳದಿಂದ ಡೈರಿ ಹೊರಬಂದಿದೆ. ಇದಕ್ಕೂ ಹಳೆಯ ಡೈರಿಗೆ ಸಂಬಂಧ ಇದೆಯೋ ಇಲ್ವೋ ಗೊತ್ತಿಲ್ಲ. ಬಿ.ಎಸ್.ಯಡಿಯೂರಪ್ಪ ಅವರು ಹೈಕಮಾಂಡ್‍ಗೆ ಕಪ್ಪು ಹಣ ನೀಡಿರುವ ಮಾಹಿತಿ ಇರುವ ಡೈರಿಯನ್ನು ಕೆ.ಎಸ್.ಈಶರಪ್ಪ ಅವರ ಪಿಎ ಪೊಲೀಸರಿಗೆ ಕೊಟ್ಟಿದ್ದಾರೆ. ಅದನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಬೇಕು ಹಾಗೂ ಸೂಕ್ತ ತನಿಖೆ ನಡೆಸಬೇಕು. ಈಶ್ವರಪ್ಪ ಅವರ ಪಿಎ ಅನ್ನು ಅಪಹರಣ ಮಾಡಲು ಹೋಗಿದ್ದು ಯಾಕೆ? ಕೊಲೆ ಮಾಡುವ ಸಂಚು ರೂಪಿಸಿದವರು ಯಾರು ಎಂಬ ಬಗ್ಗೆ ಪೊಲೀಸರೇ ಹೇಳಬೇಕಿದೆ ಎಂದರು.

Comments

Leave a Reply

Your email address will not be published. Required fields are marked *