ಅಮಿತ್ ಶಾ ರಿಂದ ನೀತಿ ಸಂಹಿತೆ ಉಲ್ಲಂಘನೆ – ಗಡಿಪಾರಿಗೆ ಆಗ್ರಹಿಸಿದ ದಿನೇಶ್ ಗುಂಡೂರಾವ್

ಬೆಂಗಳೂರು : ಕಳೆದ ಕೆಲ ದಿನಗಳ ಹಿಂದೆ ದುಷ್ಕರ್ಮಿಗಳಿಂದ ಕೊಲೆಯಾಗಿದ್ದ ಬಿಜೆಪಿ ಕಾರ್ಯಕರ್ತ ರಾಜು ಕುಟುಂಬಕ್ಕೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ 5 ಲಕ್ಷ ರೂ. ಪರಿಹಾರ ಕೊಟ್ಟು ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಕೆಪಿಸಿಸಿ ಕಾರ್ಯದರ್ಶಿ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.

ಈ ಕುರಿತು ನಗರದ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಮಿತ್ ಶಾ, ಬಿಎಸ್‍ವೈ, ಪ್ರತಾಪ್ ಸಿಂಹ ಹಣವನ್ನು ನೀಡುವ ಮೂಲಕ ಚುನಾವಣೆ ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡಿದ್ದಾರೆ. ಹಣ ನೀಡಿರುವ ಕುರಿತು ಮೃತ ಯುವಕ ರಾಜು ಅವರ ತಾಯಿಯೇ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಇದರ ವಿರುದ್ಧ ಕಾಂಗ್ರೆಸ್ ಶೀಘ್ರವೇ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗುತ್ತದೆ ಎಂದು ತಿಳಿಸಿದರು.

ಅಮಿತ್ ಶಾ ರಾಜ್ಯಕ್ಕೆ ಬಂದು ಕ್ರಿಮಿನಲ್ ರೀತಿ ವರ್ತಿಸುತ್ತಿದ್ದಾರೆ. ಅವರು ರಾಜ್ಯಕ್ಕೆ ಬರುವುದವನ್ನು ನಿಲ್ಲಿಸಬೇಕು. ಅಮಿತ್ ಶಾ ಹಾಗೂ ಯಡಿಯೂರಪ್ಪ ಜೈಲಿಗೆ ಹೋಗಿ ಬಂದವರು ಇಬ್ಬರ ವಿರುದ್ಧವೂ ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ. ರಾಜ್ಯದಲ್ಲಿ ನೀತಿ ಸಂಹಿತೆ ಉಲ್ಲಂಘಿಸುತ್ತಿರುವ ಅಮಿತ್ ಶಾ ಅವರನ್ನು ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.

ಇದೇ ವೇಳೆ ಮಾತನಾಡಿದ ಎಐಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ರಣ್‍ದೀಪ್ ಸಿಂಗ್ ಸುರ್ಜೆವಾಲ ಅವರು, ಬಿಜೆಪಿ ಅವಧಿಯಲ್ಲಿ 11 ಬ್ಯಾಂಕ್‍ಗಳಲ್ಲಿ ಹಗರಣಗಳು ನಡೆದಿವೆ. ಬ್ಯಾಂಕಿಂಗ್ ಕ್ಷೇತ್ರಕ್ಕೆ ಪಾರ್ಶ್ವವಾಯು ಬರಿಸಿದ ಹೆಗ್ಗಳಿಕೆ ಪ್ರಧಾನಿ ಮೋದಿಯವರಿಗೆ ಸೇರುತ್ತದೆ ಎಂದು ಕಿಡಿಕಾರಿದರು.  ಇದನ್ನೂ ಓದಿ : ಚುನಾವಣೆ ಸಮಯದಲ್ಲಿ ರಾಜ್ಯಕ್ಕೆ ಅಮಿತ್ ಶಾ ಆಗಮನಕ್ಕೆ ನಿಷೇಧ?

ಬ್ಯಾಂಕ್‍ಗಳಲ್ಲಿ ಸಾರ್ವಜನಿಕರ ಹಣ ಸಂಗ್ರಹ ಮಾಡಲಾಗಿದೆ. ಸಾರ್ವಜನಿಕರ ಹಣವನ್ನು ಬ್ಯಾಂಕ್‍ಗಳ ವಿವಿಧ ಶುಲ್ಕಗಳ ಮೂಲಕ ಕಬಳಿಸಲಾಗುತ್ತಿದೆ. 11 ಬ್ಯಾಂಕುಗಳಲ್ಲಿ ನಡೆದ ವಿವಿಧ ಹಗರಣಗಳಿಂದ 61 ಸಾವಿರ ಕೋಟಿ ದೇಶದ ಖಜಾನೆಗೆ ನಷ್ಟವಾಗಿದೆ. ಬ್ಯಾಂಕ್ ಆಫ್ ಬರೋಡದಲ್ಲಿ ಅಧಿಕ ಮೊತ್ತದ ಹಗರಣ ನಡೆದಿದೆ. ಪಿಎನ್‍ಬಿ ಬ್ಯಾಂಕಿಗೆ ವಂಚನೆ ಮಾಡಿದ ನೀರವ್ ಮೋದಿ ದೇಶ ಬಿಟ್ಟು ಹೋಗಲು ಬಿಜೆಪಿ ನಾಯಕರು ನೆರವಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಮೋದಿ ವಿರುದ್ಧ ಅವಿಶ್ವಾಸ ನಿರ್ಣಯ ತರುವ ಪ್ರಯತ್ನಕ್ಕೆ ಕಾಂಗ್ರೆಸ್ ಬೆಂಬಲಿಸಿತ್ತು. ಆದರೆ ಅವಿಶ್ವಾಸ ನಿರ್ಣಯ ಎದುರಿಸಲು ಮೋದಿ ಹೆದರಿದ್ದಾರೆ. ಇತ್ತೀಚೆಗೆ ನಡೆದ 10 ಲೋಕಸಭೆ ಉಪ ಚುನಾವಣೆಗಳಲ್ಲಿ ಬಿಜೆಪಿ ಜಯಗಳಿಸಿಲ್ಲ. ಎನ್‍ಡಿಎ ಆರಂಭದಲ್ಲಿ ಜೊತೆಗಿದ್ದ ಎಲ್ಲ ಪಕ್ಷಗಳು ಮೋದಿಯಿಂದ ದೂರವಾಗುತ್ತಿವೆ ಎಂದರು.

Comments

Leave a Reply

Your email address will not be published. Required fields are marked *