ಸದ್ಯ ನಮ್ಮಲ್ಲಿ ಕ್ಲೀನ್ ಆಗಿದೆ, ಆ ಕೊಳಕು ನಮಗೆ ಬೇಡ – ರಮೇಶ್ ವಿರುದ್ಧ ಡಿಕೆಶಿ ಪರೋಕ್ಷ ವಾಗ್ದಾಳಿ

– ಚುನಾವಣೆ ವೇಳೆ ಯಾರೊಂದಿಗೂ ನೆಂಟಸ್ತನ ಬೇಡ

ಬೆಳಗಾವಿ: ಸದ್ಯ ಕಾಂಗ್ರೆಸ್ ಪಕ್ಷದಲ್ಲಿ ಕ್ಲೀನ್ ಆಗಿದೆ. ಹೀಗಾಗಿ ಆ ಕೊಳಕು ನಮಗೆ ಬೇಡ ಎಂದು ಹೇಳುವ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ ಪದಾಧಿಕಾರಿಗಳ ಸಭೆಯ ಬಳಿಕ ಭಾಷಣ ಮಾಡಿದ ಡಿಕೆಶಿ, ರಮೇಶ್ ಜಾರಕಿಹೊಳಿ ವಿರುದ್ಧ ಪರೋಕ್ಷವಾಗಿ ‘ಕೊಳೆ’ ಎಂದು ಕಿಡಿಕಾರಿದರು. ನಾವು ಸಿಂಗಲ್ ಕ್ಯಾಂಡಿಡೇಟ್ ಹಾಕಿದ್ದೀವಿ, ಬಿಜೆಪಿಯವರು ಕೂಡ ಸಿಂಗಲ್ ಕ್ಯಾಂಡಿಡೇಟ್ ಹಾಕಿದ್ದಾರೆ. ಚಿಹ್ನೆ ಆಧಾರಿತ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿಯವರು ಹೆಚ್ಚಿನ ಸ್ಥಾನ ಗೆದ್ದಿರಬಹುದು. ಪಕ್ಷೇತರವಾಗಿ ಆಡಳಿತ ಪಕ್ಷದ ಇಬ್ಬರು ಶಾಸಕರು ನಿಂತು ನೇರವಾಗಿ ಚುನಾವಣೆ ಮಾಡ್ತಿದ್ದಾರೆ. ಇದು ನಮಗೂ ಗೊತ್ತಿದೆ, ನಿಮಗೂ ಗೊತ್ತಿದೆ, ಬಿಜೆಪಿಯವರಿಗೂ ಗೊತ್ತಿದೆ ಎಂದರು.

ಬಿಜೆಪಿ ಶಿಸ್ತಿನ ಬಗ್ಗೆ ದೊಡ್ಡ ಚರ್ಚೆ ನಡೆಯುತ್ತಿದೆ. ನಮಗೆ ಇಂತಹ ರೆಬೆಲ್ ಅ್ಯಟಿಟ್ಯೂಡ್ ಮುಖ್ಯನಾ, ನಮ್ಮ ಪಕ್ಷದಲ್ಲಿ ಶಿಸ್ತು ಇಟ್ಕೊಬೇಕಾ..? ಈ ಕೊಳೆ ಏನಿತ್ತು ಆ ಕೊಳೆ ನಮ್ಮಿಂದ ದೂರ ಹೋಯ್ತು. ಇಂತವರೆಲ್ಲಾ ಒಳಗಡೆ ಇದ್ದಿದ್ರೆ ಇನ್ನೂ ದೊಡ್ಡ ಅನಾಹುತ ಆಗ್ತಿತ್ತು. ನಮ್ಮ ಪಕ್ಷವನ್ನು ಮುಂದಿನ ದಿನಗಳಲ್ಲಿ ಬಲಿಷ್ಠವಾಗಿ ಕಟ್ಟಲು ಒಳ್ಳೆಯ ಅವಕಾಶ ಸಿಕ್ಕಿದೆ ಎಂದು ಹೇಳಿದರು. ಇದನ್ನೂ ಓದಿ: ಮಾರ್ಷಲ್‌ಗಳ ಮೇಲೆ ಹಲ್ಲೆ – ರಾಜ್ಯಸಭೆಯ 12 ಸದಸ್ಯರು ಅಮಾನತು

ಮಾಜಿ ಶಾಸಕ ರಾಜು ಕಾಗೆ ರಮೇಶ್ ಜಾರಕಿಹೊಳಿ ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಪ್ರತಿ ಅಸೆಂಬ್ಲಿ ಕ್ಷೇತ್ರದಲ್ಲಿ ನಮ್ಮದೊಂದು ಟೀಮ್ ಇದೆ. ಬಿಜೆಪಿ ಶಾಸಕರು, ನಾಯಕರಿಗೆ ಎಲೆಕ್ಷನ್ ವೇಳೆ ಭೇಟಿಯಾಗಲು ಏಕೆ ಅವಕಾಶ ಕೊಡುತ್ತಿದ್ದೀರಿ. ಅವರು ಯಾಕೆ ಬರ್ತಾರೆ ನೀವು ಭೇಟಿಗೆ ಅವಕಾಶ ಕೊಡಬಾರದು. ಈ ಸಂದರ್ಭದಲ್ಲಿ ಯಾವನ ಜೊತೆಯೂ ನೆಂಟಸ್ತನ ಬೇಡ. ಅವನು ಗಾಡಿ ಕಳಿಸಿದ ಅಂದ ತಕ್ಷಣ ಭೇಟಿಯಾಗುವ ಸಂಸ್ಕೃತಿ. ಇದಕ್ಕೆ ನಮ್ಮ ಲೀಡರ್‍ಗಳು ಕಡಿವಾಣ ಹಾಕಬೇಕು ಎಂದು ತಿಳಿಸಿದರು.

ಈಗಾಗಲೇ ಅರಭಾವಿ ಕ್ಷೇತ್ರದಲ್ಲಿ 10 ಸಾವಿರ ರೂ. ಮುಂಗಡ ಹಣ ಕೊಟ್ಟಿದ್ದಾರೆಂಬ ಮಾಹಿತಿ ಇದೆ. ಮೂರ್ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ವೋಟ್‍ನೇ ಹಾಕಲ್ಲ ಎಂಬ ಮಾಹಿತಿ ಇದೆ. ಮತದಾರರ ಚೀಟಿ ಇಸ್ಕೊಂಡು ಇಂಡಿಪೆಂಡೆಂಟ್ ಕ್ಯಾಂಡಿಡೇಟ್‍ಗೆ ನಾವೇ ಹಾಕ್ತೇವೆ ಅಂತಿದ್ದಾರಂತೆ. ಸತೀಶ್ ಜಾರಕಿಹೊಳಿ ಸ್ವತಃ ಏಜೆಂಟ್ ಆಗ್ತಿದ್ದಾರೆ ಅನ್ನೋದನ್ನ ನೋಡಿದೆ. ಈ ಸ್ಪಿರೀಟ್ ಅನ್ನು ಇಡೀ ರಾಜ್ಯವೇ ವೆಲ್‍ಕಮ್ ಮಾಡಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ನಮ್ಮ ಜನ ಬಂದಿದ್ದಾರೆ. ನಮ್ದೇ ಸರ್ವೇ ಟೀಮ್ ಇದೆ ಇಟ್ಟುಕೊಂಡು ನಾವು ಮಾಹಿತಿ ಪಡೆಯುತ್ತಿದ್ದೇವೆ. ಅವರು ಯಾರ, ಯಾರ ಜೊತೆ ಮಾತನಾಡ್ತಿದ್ದಾರೆ ಮಾಹಿತಿ ಪಡೆಯುತ್ತಿದ್ದೇವೆ ಎಂದರು. ಇದನ್ನೂ ಓದಿ: ಅಪ್ಪು ಸಮಾಧಿ ನೋಡಲು ಓಡುತ್ತ ಹೊರಟ ಮೂರು ಮಕ್ಕಳ ತಾಯಿ

ಫಸ್ಟ್ ಎಲೆಕ್ಷನ್, ನೆಂಟಸ್ತನ ವಿಶ್ವಾಸವನ್ನು ನಾವು ಯಾವುದೇ ಕಾರಣಕ್ಕೂ ಒಪ್ಪಲ್ಲ. ಯಾರನ್ನೂ ಕೂಡ ಭೇಟಿಗೆ ಅವಕಾಶ ಕೊಡಬೇಡಿ, ನಮ್ಮ ವೋಟ್ ಕಾಪಾಡಿ ಸಾಕು. ಬಿಜೆಪಿಯವರಿಗೂ ಸಹ ಒಂದು ದೊಡ್ಡ ಪ್ರಾಣಸಂಕಟವಾಗಿದೆ. ಬೆಳಗಾವಿ ಜಿಲ್ಲೆಯ ದುಷ್ಟ ರಾಜಕಾರಣಕ್ಕೆ ಕೊನೆ ಎಳೀತಾರೆ ಅಂತಾ ತಿಳಿದಿದ್ದೇನೆ. ಬಿಜೆಪಿಯವರು ಇದಕ್ಕೆ ಕೊನೆ ಹಾಡಲಿಲ್ಲ ಅಂದ್ರೆ ಅವರಿಗೂ ಭವಿಷ್ಯ ಇಲ್ಲ. ಸದ್ಯ ನಮ್ಮಲ್ಲಿ ಕ್ಲೀನ್ ಆಗಿದೆ, ಆ ಕೊಳಕು ನಮಗೆ ಬೇಡ ಎಂದು ರಮೇಶ್ ಜಾರಕಿಹೊಳಿಯನ್ನು ಪರೋಕ್ಷವಾಗಿ ಕೊಳಕು ಅಂತ ಡಿಕೆಶಿ ಹೇಳಿದರು.

ಬಹಳ ಜನ ಆ ಪಕ್ಷದಿಂದ ನಮ್ಮ ಪಕ್ಷಕ್ಕೆ ಬರೋರಿದ್ದಾರೆ. ಯಡಿಯೂರಪ್ಪ ನಮ್ಮದು ಒಂದೇ ವೋಟ್ ಅಂತಾ ಹೇಳಿ ಹೋಗಿದ್ದಾರೆ. ಮೂರ್ನಾಲ್ಕು ವಿಧಾನಸಭಾ ಕ್ಷೇತ್ರದ ಮತಗಟ್ಟೆಗಳಲ್ಲಿ ಹೆಚ್ಚಿನ ಭದ್ರತೆ, ವೀಡಿಯೋ ಅಳವಡಿಕೆಗೆ ಒತ್ತಾಯ ಮಾಡ್ತೇವೆ. ಡಿಸಿ, ಚುನಾವಣಾ ಆಯೋಗಕ್ಕೆ ಮನವಿ ಮಾಡ್ತಿದ್ದೇನೆ. ಟ್ರಯಲ್ ಬ್ಯಾಲೆಟ್ ಮಾಡಿ ಯಾವ ರೀತಿ ಮತದಾನ ಮಾಡಬೇಕು ತಿಳಿಸಿ. ಯಾರು ನಮ್ಮ ಸದಸ್ಯರು ಅವರ ಗಾಡಿ ಹತ್ತಬೇಡಿ. ಲಖನ್ ಕಳಿಸಿದ, ರಮೇಶ್ ಕಳಿಸಿದ ಅಂತಾ ನೀವು ಹೋಗಬೇಡಿ. ನನಗೆ ಅವರ ಮೇಲೆ ನಂಬಿಕೆ ಇಲ್ಲ. ಈ ಎಲೆಕ್ಷನ್‍ನಲ್ಲಿ ಬಂಡಾಯಕೋರರಿಗೆ ಬುದ್ಧಿ ಕಲಿಸುವ ಅವಕಾಶ ಇದೆ. ಇದಕ್ಕೆ ನೀವು ಇತಿ ಶ್ರೀ ಹಾಡಬೇಕು ಎಂದು ಡಿಕೆಶಿ ಕರೆ ನೀಡಿದರು.

Comments

Leave a Reply

Your email address will not be published. Required fields are marked *