ಹಾಳಾದ ರಸ್ತೆಯಲ್ಲಿ ಭತ್ತ ನಾಟಿ

ಕೊಪ್ಪಳ: ಹಾಳಾದ ರಸ್ತೆಯಲ್ಲಿ ಭತ್ತದ ಸಸಿ ನಾಟಿ ಮಾಡುವ ಮೂಲಕ ಜನರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ಮತ್ತು ಕಂಪ್ಲಿಗೆ  ಸಂಪರ್ಕ ಕಲ್ಪಿಸುವ ಪ್ರಮುಖ ಬೈಪಾಸ್ ರಸ್ತೆಯಲ್ಲಿ ನಡೆದಿದೆ.

ಗಂಗಾವತಿಯ ಹೊಸಳ್ಳಿ ರಸ್ತೆ ಹಾಳಾಗಿ ಗದ್ದೆಯಂತಾಗಿದೆ. ರಸ್ತೆ ಹಾಳಾಗಿ ಆರು ತಿಂಗಳಾದ್ರೂ ಅಧಿಕಾರಿಗಳು ಕ್ಯಾರೆ ಎನ್ನುತ್ತಿರಲಿಲ್ಲ. ಹಾಗಾಗಿ ಜನರು ನಮ್ಮೂರಿಗೆ ಸರಿಯಾದ ರಸ್ತೆಯನ್ನು ಮಾಡಿಕೊಡಿ ಎಂದು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದರು. ಅಧಿಕಾರಿಗಳು ಇದಕ್ಕೆ ಸ್ಪಂದಿಸದ ಕಾರಣ ರಸ್ತೆ ಎಷ್ಟರ ಮಟ್ಟಿಗೆ ಹಾಳಾಗಿದೆ ಎಂದು ತೋರಿಸಲು ರಸ್ತೆಯಲ್ಲಿ ಭತ್ತ ನಾಟಿ ಮಾಡಿದ್ದಾರೆ.

ಸುಮಾರು 2 ವರ್ಷದಿಂದ ರಸ್ತ ಕಾಮಗಾರಿ ಆಗಿಲ್ಲ. ಈ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ, ಮಳೆಗಾಲ ಆದ ನಂತರ ಮಾಡುತ್ತೇವೆ ಎಂದು ನಾನಾ ಕಾರಣಗಳನ್ನು ನೀಡುತ್ತಿದ್ದಾರೆ. ಆದರೆ ಇದುವರೆಗೂ ಈ ರಸ್ತೆಯನ್ನು ಸರಿ ಮಾಡಿಲ್ಲ. ಅಲ್ಲದೆ ಶಾಲಾ – ಕಾಲೇಜು ವಿದ್ಯಾರ್ಥಿಗಳು ಈ ರಸ್ತೆಯಲ್ಲಿ ಬೀಳುವುದನ್ನು ನೋಡಿದ್ದೇವೆ. ವಯೋವೃದ್ಧರು ನಡೆದುಕೊಂಡು ಹೋಗುವುದಕ್ಕೆ ಪರದಾಡುತ್ತಿದ್ದಾರೆ. ಆಟೋದಲ್ಲಿ ಇಲ್ಲಿಗೆ ಬಂದರೆ ರಸ್ತೆ ಸರಿಯಿಲ್ಲ ಎಂದು ಚಾಲಕರು ಡಬಲ್ ಚಾರ್ಜ್ ಕೇಳುತ್ತಾರೆ ಎಂದು ಸ್ಥಳೀಯರೊಬ್ಬರು ಹೇಳಿದ್ದಾರೆ.

ಹೊಸಳ್ಳಿ ರಸ್ತೆಗೆ ಲಿಂಕ್ ಆಗುವ ರೋಡ್ ಇದು. ಅಲ್ಲದೆ ಕಂಪ್ಲಿ ಬೈಪಾಸ್ ರಸ್ತೆ ಕೂಡ ಇದಾಗಿದೆ. ಹಿರಿಯರ ನೇತೃತ್ವದಲ್ಲಿ ಅಧಿಕಾರಿಗಳನ್ನು ಮನವಿ ಮಾಡಿಕೊಂಡರು ಕೂಡ ಯಾರು ಸರಿಯಾಗಿ ಸ್ಪಂದಿಸಿಲ್ಲ. ಸದ್ಯ ಈಗ ಜಿಲ್ಲಾಧಿಕಾರಿ ಪಿ. ಸುನಿಲ್ ಕುಮಾರ್ ಅವರು ಈ ರಸ್ತೆ ಸರಿ ಮಾಡಿಕೊಳ್ಳುತ್ತೇನೆ ಎಂದು ಭರವಸೆ ನೀಡಿದ್ದಾರೆ. ಅವರು ಆದಷ್ಟು ಬೇಗ ಈ ರಸ್ತೆ ಸರಿ ಮಾಡಿಕೊಡಲಿ. ಆಗ ಸಾರ್ವಜನಿಕರಿಗೆ ತೊಂದರೆ ಆಗುವುದಿಲ್ಲ ಎಂದು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *