ಮಗನಿಗೆ `ಇಂಡಿಯಾ’ ಹೆಸರು: ಕೊಪ್ಪಳ ವ್ಯಕ್ತಿ ಈ ಹೆಸರನ್ನು ಇಟ್ಟಿದ್ದು ಯಾಕೆ?

ಕೊಪ್ಪಳ: ಈ ಹಿಂದೆ ದೇವರ ಹೆಸರುಗಳೇ ತಮ್ಮ ಮಕ್ಕಳ ಹೆಸರುಗಳಾಗ್ತಿದ್ದವು. ಈಗ ಕಾಲ ಬದಲಾದಂತೆ ಮಗು ಹುಟ್ಟುವ ಮೊದಲೇ ವಿಭಿನ್ನ ಹೆಸರು ಹುಡುಕುವ ಟ್ರೆಂಡ್ ಶುರುವಾಗಿದೆ. ಆದ್ರೆ, ಕೊಪ್ಪಳದಲ್ಲೊಬ್ಬರು ತಮ್ಮ ಮಗನಿಗೆ ಇಂಡಿಯಾ ಅಂತಾ ಹೆಸರಿಡುವ ಮೂಲಕ ದೇಶಾಭಿಮಾನ ಮೆರೆದಿದ್ದಾರೆ.

ಕೊಪ್ಪಳ ತಾಲೂಕಿನ ಕುಣಿಕೇರಿ ತಾಂಡದ ಗೋವಿಂದಾ ನಾಯ್ಕ ಎಂಬುವರು ತಮ್ಮ ಮಗನಿಗೆ ಇಂಡಿಯಾ ಅಂತಾ ಹೆಸರಿಟ್ಟಿದ್ದಾರೆ. 14 ವರ್ಷದ ಇಂಡಿಯಾ ಕೊಪ್ಪಳ ತಾಲೂಕಿನ ಹನಕುಂಟಿಯಲ್ಲಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 9ನೇ ತರಗತಿಯಲ್ಲಿ ಓದುತ್ತಿದ್ದಾನೆ.

ಕಾರ್ಗಿಲ್ ಯುದ್ಧದ ನಂತರ ಕೊಪ್ಪಳದಲ್ಲಿ ದೇಶ ಭಕ್ತಿ ಬಗ್ಗೆ ಸಾಕಷ್ಟು ಚರ್ಚೆ ನಡೆದಿತ್ತಂತೆ. ಆಗ ಕೆಲ ದೇಶಭಕ್ತಿಯ ಚಲನಚಿತ್ರ ನೋಡಿದ ಗೋವಿಂದಪ್ಪ ತಮ್ಮ ಮಗನಿಗೆ ಇಂಡಿಯಾ ಅಂತಾ ಹೆಸರಿಟ್ಟಿದ್ದಾರೆ. ಹೆಸರು ಕೇಳ್ತಿದ್ದಂತೆಯೇ ಎಲ್ಲರೂ ಆಶ್ಚರ್ಯದಿಂದ ಮತ್ತೊಮ್ಮೆ ಹೆಸರು ಕೇಳ್ತಾರೆ. ಅಷ್ಟೇ ಅಲ್ಲದೇ ಇದು ನಿನ್ನ ಪೆಟ್ ನೇಮ್ ಅಂತಾ ಕೇಳ್ತಾರೆ ಎಂದು ಇಂಡಿಯಾ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಹೇಳಿದ್ದಾನೆ.

ಗೋವಿಂದಪ್ಪ ಅವಿದ್ಯಾವಂತರಾಗಿದ್ದು, ಕೂಲಿ ಮಾಡಿ ಜೀವನ ಮಾಡ್ತಿದ್ದಾರೆ. ಆದ್ರೂ ತಮ್ಮ ಮಗನಿಗೆ `ಇಂಡಿಯಾ’ ಅಂತಾ ಹೆಸರಿಟ್ಟು ದೇಶಾಭಿಮಾನ ಮರೆಯುತ್ತಿರುವುದು ನಿಜಕ್ಕೂ ಹೆಮ್ಮೆ ಅಂತಾ ಸ್ಥಳೀಯರು ಹೇಳುತ್ತಾರೆ.

ಭಾರತದೊಂದಿಗೆ ದೀರ್ಘಕಾಲ ಅವಿನಾಭಾವ ಸಂಬಂಧ ಹೊಂದಿದ್ದ ಪರಿಣಾಮ ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ಜಾಂಟಿ ರೋಡ್ಸ್ ತಮ್ಮ ಮಗಳಿಗೆ `ಇಂಡಿಯಾ’ ಅಂತಾ ಹೆಸರಿಟ್ಟಿದ್ದರು. ಈ ಹಿಂದೆ ನ್ಯೂಜಿಲೆಂಡ್ ಮಾಜಿ ವೇಗಿ ಡಿಯಾನ್ ನ್ಯಾಷ್ ಕೂಡ ತಮ್ಮ ಮಗಳಿಗೆ ಇಂಡಿಯಾ ಅಂತಾ ಹೆಸರಿಸಿದ್ದರು.

Comments

Leave a Reply

Your email address will not be published. Required fields are marked *