ರಾಜ್ಯದಲ್ಲಿ ಮೊದಲ ಪ್ರಕರಣ – ಮೊಣಕಾಲು ಚಿಪ್ಪು ಬದಲಾವಣೆ ಶಸ್ತ್ರಚಿಕಿತ್ಸೆ ಮಾಡಿದ ಕೊಪ್ಪಳದ ಸರ್ಕಾರಿ ವೈದರು

ಕೊಪ್ಪಳ: ರಾಜ್ಯದಲ್ಲಿ ಮೊದಲ ಬಾರಿಗೆ ಸರ್ಕಾರಿ ಉಪ ವಿಭಾಗ ಆಸ್ಪತ್ರೆಯಲ್ಲಿ ಮೊಣಕಾಲು ಚಿಪ್ಪು ಬದಲಾವಣೆ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಮಾಡಲಾಗಿದೆ. ಗಂಗಾವತಿ ತಾಲೂಕು ಆಸ್ಪತ್ರೆಯಲ್ಲಿ ಈ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ.

ವಯೋಸಹಜ ಹಾಗೂ ಅತಿಯಾದ ಮೊಣಕಾಲಿನ ಮೇಲಿನ ಒತ್ತಡದಿಂದಾಗಿ ಸವೆಯುವ ಮೊಣಕಾಲು ಚಿಪ್ಪಿನ ಬದಲಾವಣೆ(ಟೋಟಲ್ ನೀ ರಿಪ್ಲೇಸ್‍ಮೆಂಟ್) ಶಸ್ತ್ರಚಿಕಿತ್ಸೆಯನ್ನು ಇಬ್ಬರು ರೋಗಿಗಳಿಗೆ ಇಲ್ಲಿನ ಸರ್ಕಾರಿ ಆಸ್ಪತ್ರೆಯ ವೈದ್ಯರು ಮಾಡಿದ್ದಾರೆ. ಆಯುಷ್ಮಾನ್ ಭಾರತ ಯೋಜನೆಯಡಿ ಹೊಸಪೇಟೆ ತಾಲೂಕಿನ ಗ್ರಾಮೀಣ ಭಾಗದ ಹಿರಿಯರಾದ ಶಾರದಮ್ಮ ಹಾಗೂ ಗಂಗಾವತಿಯ ಸಿದ್ದಪ್ಪ ಪೂಜಾರಿ ಅವರಿಗೆ ಈ ಚಿಕಿತ್ಸೆ ನೆರವೇರಿಸಲಾಗಿದೆ ಎಂದು ಆಸ್ಪತ್ರೆಯ ಆಡಳಿತಾಧಿಕಾರಿ ಈಶ್ವರ ಸವಡಿ ತಿಳಿಸಿದ್ದಾರೆ.

ಸುಮಾರು ಐದು ಗಂಟೆಗಳ ಕಾಲ ನಡೆದ ಶಸ್ತ್ರ ಚಿಕಿತ್ಸೆಯಲ್ಲಿ ವೈದ್ಯರಾದ ಸಲಾವುದ್ದೀನ್, ರೇಣುಕಾರಾಧ್ಯ, ಸುಜಾತ, ಶಿವರಾಜ ಪಾಟೀಲ್ ಅವರು ಭಾಗಿಯಾಗಿದ್ದರು. ಈಗಾಗಲೇ ಹತ್ತಾರು ಅಧುನಿಕ ವೈದ್ಯ ಸೌಲಭ್ಯ, ಸತತ ಎರಡು ಬಾರಿ ಕೇಂದ್ರ ಸರ್ಕಾರದ ಕಾಯಕಲ್ಪ ಪ್ರಶಸ್ತಿ ಪಡೆದ ರಾಜ್ಯದ ಏಕೈಕ ತಾಲೂಕು ಆಸ್ಪತ್ರೆ ಎಂಬ ಖ್ಯಾತಿ ಗಳಿಸಿರುವ ಆಸ್ಪತ್ರೆ ಈಗ ಮತ್ತೊಂದು ಮೈಲಿಗಲ್ಲು ಸಾಧಿಸಿದೆ.

ಈ ಸರ್ಕಾರಿ ಆಸ್ಪತ್ರೆ ಖಾಸಗಿ ಆಸ್ಪತ್ರೆಗೆ ಸೆಡ್ಡು ಹೊಡೆದಿದ್ದು, ಈ ಹಿಂದೆ ಪಬ್ಲಿಕ್ ಹೀರೋಗಳಾಗಿದ್ದ ಇಲ್ಲಿನ ಮುಖ್ಯ ವೈದ್ಯಧಿಕಾರಿ ಈಶ್ವರ ಸವಡಿ ಮತ್ತು ಅವರ ಸಿಬ್ಬಂದಿಯ ಕೆಲಸಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Comments

Leave a Reply

Your email address will not be published. Required fields are marked *