ಕೊಪ್ಪಳ: ಕಾಯಿಲೆಯೊಂದಕ್ಕೆ ಚಿಕಿತ್ಸೆ ಪಡೆಯಲು ಆಗಮಿಸಿದ್ದ ಮಹಿಳೆ ವೈದ್ಯರು ನೀಡಿದ ರಾಂಗ್ ಡೋಸ್‍ನಿಂದ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿ ಮೃತರ ಸಂಬಂಧಿಕರು ಪ್ರತಿಭಟನೆ ನಡೆಸಿದ ಘಟನೆ ಕೊಪ್ಪಳದ ಗಂಗಾವತಿ ನಗರದಲ್ಲಿ ನಡೆದಿದೆ.
ಮೃತ ಮಹಿಳೆ ಕಂಪ್ಲಿ ನಗರದ ಚಪ್ಪರದಳ್ಳಿಯ ನಿವಾಸಿ ಚಾಂದ್‍ಬೀ (49) ಎಂದು ಗುರುತಿಸಲಾಗಿದೆ. ದೇಹದಲ್ಲಿ ಕುರುವಿನ ಆಕಾರದಲ್ಲಿ ಗಡ್ಡೆ ಇತ್ತು. ಅದನ್ನು ನಿವಾರಿಸುವ ಉದ್ದೇಶಕ್ಕೆ ಮಹಿಳೆ ಇಲ್ಲಿನ ಲಕ್ಷ್ಮಿ ನರ್ಸಿಂಗ್ ಹೊಂ ಎಂಬ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಶುಕ್ರವಾರ ಶಸ್ತ್ರಚಿಕಿತ್ಸೆ ಮಾಡುವುದಾಗಿ ಹೇಳಿದ್ದ ವೈದ್ಯರು, ರೋಗಿಯನ್ನು ದಾಖಲಿಸಿಕೊಂಡು ಚಿಕಿತ್ಸೆ ಆರಂಭಿಸಿ ಚುಚ್ಚುಮದ್ದನ್ನು ನೀಡಿದ್ದಾರೆ. ಚುಚ್ಚುಮದ್ದು ನೀಡಿದ ನಂತರ ಮಹಿಳೆಯ ದೇಹದ ಬಣ್ಣ ಬದಲಾಗಿದ್ದು, ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿ ಮೃತಳ ಸಂಬಂಧಿಕರು ಆಸ್ಪತ್ರೆಯ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಧರಣಿ ಕುಳಿತವರನ್ನು ಸಮಾಧಾನ ಪಡಿಸಿದ್ದಾರೆ.
ಈ ಸಂಬಂಧ ಮೃತಳ ಸಂಬಂಧಿಕರು ನಗರ ಠಾಣೆಗೆ ಲಿಖಿತ ದೂರು ನೀಡಿದ್ದಾರೆ.

Leave a Reply