ಕೊಪ್ಪಳದಲ್ಲಿ ಹುಡುಕಾಟ- ಪಕ್ಕದ ಗದಗದಲ್ಲಿ ಪೊಲೀಸರ ಜೊತೆ ಆರೋಪಿಯ ಪಾರ್ಟಿ

ಕೊಪ್ಪಳ: ಒಂದು ಕಡೆ ಆರೋಪಿಗಾಗಿ ಕೊಪ್ಪಳ ಜಿಲ್ಲಾ ಪೊಲೀಸರು ಹುಡುಕಾಟ ಮಾಡುತ್ತಿದ್ದರೆ, ಇನ್ನೊಂದು ಕಡೆ ಅದೇ ಆರೋಪಿಯೊಂದಿಗೆ ಪಕ್ಕದ ಗದಗ ಜಿಲ್ಲಾ ಪೊಲೀಸರು ಬಿಂದಾಸ್ ಪಾರ್ಟಿ ಮೂಡ್‍ನಲ್ಲಿದ್ದಾರೆ.

ಹೌದು, ಕಳೆದ ಹದಿನೈದು ದಿನದ ಹಿಂದೆ ಕೊಪ್ಪಳದ ಕಾರಟಗಿ ತಾಲೂಕಿನ ಬುದೂಗೂಂಪ ನಿವಾಸಿಯಾದ ಶರಣಪ್ಪ ಕೊತ್ವಾಲ್ ವಿರುದ್ಧ ಕಾರಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣವೊಂದು ದಾಖಲಾಗಿತ್ತು.

ಪ್ರಕರಣ ದಾಖಲಾದ ಕೂಡಲೇ ಆರೋಪಿ ಶರಣಪ್ಪ ಕೊತ್ವಾಲ್ ಎಸ್ಕೇಪ್ ಆಗಿದ್ದನು. ಪ್ರಕರಣ ದಾಖಲಿಸಿಕೊಂಡ ಕಾರಟಗಿ ಪೊಲೀಸರು ಆರೋಪಿಯನ್ನು ಹಿಡಿಯುವುದಕ್ಕೆ ಹರಸಹಾಸ ಪಡುತ್ತಿದ್ದಾರೆ. ಆದರೆ ನೆರೆಯ ಗದಗ ಜಿಲ್ಲೆಯ ಗಜೇಂದ್ರಗಢದ ಪಿ.ಎಸ್.ಐ ರಾಮಣ್ಣ ಮಾತ್ರ ಆರೋಪಿ ಜೊತೆ ಬರ್ತ್ ಡೇ ಪಾರ್ಟಿ ಮೂಡ್ ನಲ್ಲಿದ್ದಾರೆ.

ಇತ್ತೀಚಿಗಷ್ಟೆ ಜೂನ್ 06 ರಂದು ಪಿ.ಎಸ್.ಐ ಪತ್ನಿ ಮಾಲತಿನಾಯಕ್ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದರು. ಈ ವೇಳೆ ಬಾಗಲಕೋಟೆ ಜಿಲ್ಲೆಯ ಭೂ ಮತ್ತು ಗಣಿ ಇಲಾಖೆ ಅಧಿಕಾರಿ ಕೃಷ್ಣವೇಣಿ ಸಹ ಆರೋಪಿ ಜೊತೆ ಕಾಣಿಸಿಕೊಂಡಿದ್ದಾರೆ. ಇದೀಗ ಆರೋಪಿ ಜೊತೆಗಿರುವ ಮೂರು ಜಿಲ್ಲೆಯ ಅಧಿಕಾರಿಗಳ ಫೋಟೋ ಸ್ಥಳೀಯಮಟ್ಟದಲ್ಲಿ ವೈರಲ್ ಆಗಿದ್ದು ಸಾಕಷ್ಟು ಅನುಮಾನಕ್ಕೆ ಎಡ ಮಾಡಿಕೊಡುತ್ತಿದೆ.

ಆರೋಪಿ ಜೊತೆ ಮೂರು ಜಿಲ್ಲೆಯ ಸರ್ಕಾರಿ ಅಧಿಕಾರಿಗಳು ಬಿಂದಾಸ್ ಆಗಿರುವುದು, ಆರೋಪಿಯನ್ನು ಬಚಾವ್ ಮಾಡಲು ಪೊಲೀಸರೇ ಬೆಂಗಾವಲಾಗಿ ನಿಂತಿದ್ದಾರೆ ಎನ್ನುವ ಅನುಮಾನ ಸಾರ್ವಜನಿಕರಲ್ಲಿ ಮೂಡುತ್ತಿದೆ. ಆರೋಪಿಯನ್ನು ಗಜೇಂದ್ರಗಢ ಪೊಲೀಸ್ ಕ್ವಾರ್ಟರ್ಸ್ ನಲ್ಲಿಯೇ ಪಿಎಸ್‍ಐ 15 ದಿನಗಳಿಂದ ರಕ್ಷಣೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

Comments

Leave a Reply

Your email address will not be published. Required fields are marked *