ಕೊಪ್ಪಳ: ಕಾರಟಗಿ ಪೊಲೀಸ್ ಠಾಣೆ ವ್ಯಾಪ್ತಿಯ ಮೈಲಾಪುರ ಮತ್ತು ಬೂದಗುಂಪಾ ಗ್ರಾಮದ ಹೊರವಲಯದಲ್ಲಿ ನಿಷೇಧವಾಗಿರುವ ಕೋಳಿ ಜೂಜಾಟಕ್ಕೆ ಪೊಲೀಸರೇ ಅನುಮತಿ ನೀಡಿದ್ದಾರೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಕೊಪ್ಪಳದ ಕಾರಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಟ್ಕಾ, ಮರುಳು ಮಾಫಿಯಾ ಹಾಗೂ ಇಸ್ಪೀಟ್ ನಂತಹ ಅಕ್ರಮ ದಂಧೆಗೆ ಕಡಿವಾಣ ಇಲ್ಲದಂತಾಗಿದೆ. ಇದರಿಂದ ಯುವ ಪೀಳಿಗೆ ಹಾಳಾಗುತ್ತಿದ್ದು ಪೋಲಿಸರ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕೋಳಿ ಜೂಜಾಟವು ರಾಜಾರೋಷವಾಗಿ ನಡೆದರೂ, ಆದರೆ ಪೋಲಿಸರು ಈ ಅಕ್ರಮ ಜೂಜುಕೋರರ ವಿರುದ್ಧ ಯಾವುದೇ ರೀತಿಯ ಕ್ರಮ ಜರುಗಿಸಿಲ್ಲ. ಒಂದು ಪಂದ್ಯಕ್ಕೆ ಸಾವಿರಾರು ರೂ. ಬೆಟ್ಟಿಂಗ್ ಕಟ್ಟಲಾಗುತ್ತದೆ. ಹುಂಜಗಳ ಕಾಲಿಗೆ ಕತ್ತಿ ಕಟ್ಟಿ, ಪೈಪೋಟಿ ನಡೆಸಲಾಗುತ್ತದೆ. ಪಂದ್ಯಾವಳಿಗಾಗಿಯೇ ಹುಂಜಗಳನ್ನು ಬಲಿಷ್ಠವಾಗಿ ಬೆಳೆಸಿ, ತರಬೇತಿ ನೀಡಿ ಸಿದ್ಧಗೊಳಿಸಲಾಗುತ್ತದೆ. ಕೋಳಿ ಪಂದ್ಯ ಜೂಜಾಟ ನಿಷೇಧವಿದ್ದರೂ ಕೆಲವೆಡೆ ನೂತನ ವರ್ಷಾಚರಣೆ ಹಾಗೂ ವಿವಿಧ ಹಬ್ಬದ ಸಮಯದಲ್ಲಿ ಪಂದ್ಯಗಳು ನಡೆಯುತ್ತಿವೆ.

ಕೊಪ್ಪಳ ಜಿಲ್ಲೆಯಲ್ಲದೆ, ಬಳ್ಳಾರಿ, ರಾಯಚೂರು ಜಿಲ್ಲೆಗಳಿಂದಲೂ ನೂರಾರು ಜನರು ಆಗಮಿಸುತ್ತಾರೆ. ವಿಶೇಷವಾಗಿ ಜವಾರಿ ಹುಂಜಕ್ಕೆ ಬೆಟ್ಟಿಂಗ್‍ನಲ್ಲಿ ಬೇಡಿಕೆಯಿದೆ. ಇದರಲ್ಲಿ ಅಬ್ರಾಸ್ ಹುಂಜಕ್ಕೂ ಜನರು ಮೂಗಿಬಿದ್ದು ಬೆಟ್ಟಿಂಗ್ ಕಟ್ಟುತ್ತಾರೆ. ಎತ್ತರ ಮತ್ತು ತೂಕದ ಮೇಲೆ 600 ರಿಂದ 1 ಸಾವಿರ ರೂ. ದರದಲ್ಲಿ ಹುಂಜಗಳನ್ನು ಖರೀದಿಸಲಾಗುತ್ತದೆ. ಹುಂಜಕ್ಕೆ ಮತ್ತೊಂದು ಹುಂಜವನ್ನು ಎದುರಾಳಿಯಾಗಿ ಬಿಡಲಾಗುತ್ತದೆ. ಕದನಕ್ಕೆ ಇಳಿಯುವ ಹುಂಜಗಳು ಪರಸ್ಪರ ಕುಕ್ಕುವುದು, ಕಾಲಿನಿಂದ ತಿವಿಯುವ ಮೂಲಕ ಪಂದ್ಯದಲ್ಲಿ ಜಯಶಾಲಿಯಾಗುತ್ತವೆ. ಜೂಜಾಟಕ್ಕೆ ಸುತ್ತಲಿನ ಹಳ್ಳಿಗಳ ನೂರಾರು ಯುವಕರು ಸಾವಿರಾರು ರೂ. ಕಳೆದುಕೊಳ್ಳುತ್ತಿದ್ದಾರೆ.

Leave a Reply