ಮೋದಿ ವಿರುದ್ಧ ಮಾಜಿ ಸಚಿವರ ಹೇಳಿಕೆಗೆ ಶಾಸಕ ಟಾಂಗ್

ಕೊಪ್ಪಳ: ಪ್ರಧಾನಿ ನರೇಂದ್ರ ಮೋದಿ ಬಂದರೇನು ಡಬ್ಬಿಯಲ್ಲಿ ವೋಟ್ ಬೀಳುತ್ತಾ ಎಂಬ ಮಾಜಿ ಸಚಿವ ಶಿವರಾಜ್ ತಂಗಡಗಿ ಹೇಳಿಕೆಗೆ ಶಾಸಕ ಬಸವರಾಜ್ ದಡೇಸೂಗೂರ್ ಟಾಂಗ್ ನೀಡಿದ್ದಾರೆ.

ಗಂಗಾವತಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿ ಅವರಿಗೆ ತಂಗಡಗಿ ಯಾವ ಲೆಕ್ಕ. ಮೋದಿಗೆ ತಂಗಡಗಿ ಹೋಲಿಸಲು ಆಗುತ್ತಾ ಎಂದು ಪ್ರಶ್ನಿಸುವ ಮೂಲಕ ತಿರುಗೇಟು ನೀಡಿದ್ದಾರೆ.

ಮೋದಿ ಒಬ್ಬ ಜಗತ್ತು ಮೆಚ್ಚಿದ ನಾಯಕನಾಗಿದ್ದಾರೆ. ಮೋದಿ ಎಲ್ಲಿ ಈ ಸಾಮಾನ್ಯ ಶಿವರಾಜ್ ತಂಗಡಗಿ ಎಲ್ಲಿ. ಈ ದೇಶದಲ್ಲಿ ನಾವು ಎಷ್ಟು ಪಾರ್ಲಿಮೆಂಟ್ ಸೀಟ್ ಗೆದ್ದಿದ್ದೇವೆ ಎನ್ನುವುದು ಅವರಿಗೆ ಮೊದಲು ಗೊತ್ತಾಗಬೇಕು. ಈ ಸಾರಿಯೂ ಎಷ್ಟು ಗೆಲ್ಲುತ್ತೇವೆ ಎನ್ನುವುದು ಅವರಿಗೆ ಗೊತ್ತಾಗಬೇಕು. ಈ ಬಾರಿ ಕರಡಿ ಸಂಗಣ್ಣ ಅವರನ್ನು ಕಾಡಿಗೆ ಕಳುಹಿಸುತ್ತೇವೆ ಎಂದು ಹೇಳಿದ್ದಾರೆ.

ಸಂಗಣ್ಣ ಅವರಿಗೆ ಬಿ ಫಾರಂ ಕೊಡಬಾರದು ಎಂದು ತಂಗಡಗಿ ಪ್ರಾರ್ಥನೆ ಮಾಡಿದ್ದಾರೆ. ತಂಗಡಗಿ ಬೇರೋಬ್ಬರಿಗೆ ಟಿಕೆಟ್ ಕೊಡಲು ಹೇಳಿದ್ದರು. ಆದ್ರೆ ಸಿದ್ದರಾಮಯ್ಯ, ರಾಜಶೇಖರ್ ಹಿಟ್ನಾಳ್ ಗೆ ಟಿಕೆಟ್ ನೀಡಿದ್ದಾರೆ. ತಂಗಡಗಿ ಕಲ್ಪನೆ ಬೇರೆ, ಹೇಳುವುದು ಬೇರೆ. ಇಡೀ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುತ್ತದೆ ಎಂದು ಹೇಳುತ್ತಾರೆ. 16 ವರ್ಷದ ಹುಡುಗನೂ ಕೂಡ ಬಿಜೆಪಿಯೇ ಗೆಲ್ಲುತ್ತದೆ ಎಂದು ಹೇಳುತ್ತಾನೆ. ಮೋದಿ ಬಂದು ಹೇಳುವುದು ಬೇಡ, ಬರೀ ಎಡಗೈ ಮೇಲೆ ಮಾಡಿದರೆ ಸಾಕು ಲಕ್ಷ ವೋಟ್ ಬೀಳುತ್ತವೆ. ಕೈ ಮಾಡೋದನ್ನ ನಾವು ಗಿಫ್ಟ್ ಎಂದು ಅಂದುಕೊಳ್ತೀವಿ ಅಂದ್ರು. ಇದನ್ನೂ ಓದಿ: ಮೋದಿ ಬಂದ್ರೇನು ಡಬ್ಬಿಯಲ್ಲಿ ವೋಟ್ ಬೀಳ್ತಾವಾ? ಮಾಜಿ ಸಚಿವ

ಮೋದಿ ಸುಳ್ಳು ಹೇಳುತ್ತಾರೆ ಎಂದು ತಂಗಡಗಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಸುಳ್ಳು ಹೇಳಿದ್ದಕ್ಕೆ ಯಾರು ಸೋತಿದ್ದಾರೆ ಎನ್ನುವುದು ನಿಮಗೆ ತಿಳಿದಿದೆ. ಸುಳ್ಳು ಹೇಳಿದ್ದಕ್ಕೆ ತಂಗಡಗಿ ಸೋತಿದ್ದಾರೆ. ಸತ್ಯ ಹೇಳಿದ್ದಕ್ಕೆ ಮೋದಿ ಗೆದ್ದಿದ್ದಾರೆ. ಸತ್ಯಕ್ಕೆ ಸಾವಿಲ್ಲ ಎನ್ನುವುದಕ್ಕೆ ನಾವು 4 ಜನ ಗೆದ್ದಿದ್ದೇವೆ. ತಂಗಡಗಿಗೆ ಪಕ್ಷದಲ್ಲಿ ಬಹಳ ಅಸಮಾಧಾನ ಇದೆ. ಅದೇ ಕಾರಣಕ್ಕೆ ಕ್ಷೇತ್ರದಲ್ಲಿ ಬಿಜೆಪಿಗೆ ವೋಟ್ ಹಾಕುವಂತೆ ಹೇಳುತ್ತಿದ್ದಾನೆ. ತನ್ನ ಬಳಿ ಇರುವ ಫೋನ್ ನಂಬರ್ ಗಳಿಗೆ ಫೋನ್ ಮಾಡಿ ಬಿಜೆಪಿಗೆ ವೋಟ್ ಹಾಕಿ ಎಂದು ಹೇಳುತ್ತಿದ್ದಾನೆ. ತಂಗಡಗಿ ಬಿಜೆಪಿಗೆ ಬಂದರೆ ಸ್ವಾಗತ ಮಾಡ್ತೇವೆ ಎಂದು ಹೇಳಿದ್ರು.

ಸಂದರ್ಭ ಬಂದರೆ ತಂಗಡಗಿ ತಲೆ ಕೆಟ್ಟು ಬಿಜೆಪಿಗೆ ವೋಟ್ ಹಾಕಬಹುದು. ತಂಗಡಗಿ ಪತ್ನಿ ಎಂಎಲ್‍ಎ ಎಲೆಕ್ಷನ್ ನಲ್ಲಿ ನನಗೆ ವೋಟ್ ಹಾಕಿದ್ದಾರೆ. ಬಳಿಕ ಜನರ ಮುಂದೆ ನನ್ನ ಅಣ್ಣ ಗೆಲ್ಲಲಿ ಎಂದು ಹೇಳಿದ್ದಾರೆ. ಹೀಗಾಗಿ ನಮ್ಮ ತಂಗಿ ನಮಗೆ ವೋಟ್ ಹಾಕಿಲ್ಲ ಎಂದು ನಂಬದೆ ಇರೋಕೆ ಆಗುತ್ತಾ. ಇದನ್ನ ನೋಡಿದರೆ ಯಾರು ಸುಳ್ಳು ಹೇಳುತ್ತಾರೆ. ಯಾರು ಸತ್ಯ ಹೇಳ್ತಾರೆ ಗೊತ್ತಾಗಲ್ವ ಎಂದು ಶಾಸಕರು ಪ್ರಶ್ನಿಸಿದ್ದಾರೆ.

Comments

Leave a Reply

Your email address will not be published. Required fields are marked *