ಕೆಕೆಆರ್ ಆಟಗಾರನಿಗೆ ಶಾಕ್‍ ಕೊಟ್ಟ ಬಿಸಿಸಿಐ

– ಪ್ರವೀಣ್ ತಾಂಬೆ ಐಪಿಎಲ್‍ಗೆ ಅನರ್ಹ

ಮುಂಬೈ: ಐಪಿಎಲ್ ಕ್ರಿಕೆಟ್ ಲೀಗ್ 2020ಕ್ಕೆ ಮುಂಬೈ ಮೂಲದ ಅನುಭವಿ ಸ್ಪಿನ್ ಆಟಗಾರ ಪ್ರವೀಣ್ ತಾಂಬೆರನ್ನು ಅನರ್ಹಗೊಳಿಸಿ ಬಿಸಿಸಿಐ ಆದೇಶ ಪ್ರಕಟಿಸಿದೆ.

48 ವರ್ಷದ ಪ್ರವೀಣ್ ತಾಂಬೆ ಅವರನ್ನು ಈ ಬಾರಿ ನಡೆದ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಖರೀದಿ ಮಾಡಿತ್ತು. ಮೂಲ ಬೆಲೆ 20 ಲಕ್ಷ ರೂ.ಗಳನ್ನು ಹೊಂದಿದ್ದ ಪ್ರವೀಣ್ ಅವರನ್ನು ಬೇರೆ ಯಾವುದೇ ತಂಡದ ಮಾಲೀಕರು ಖರೀದಿ ಮಾಡಲು ಮುಂದಾಗದ ಕಾರಣ ಕೋಲ್ಕತ್ತಾ ತಂಡದ ಸುಲಭವಾಗಿ ಪ್ರವೀಣ್‍ರನ್ನು ಪಡೆದಿತ್ತು.

ಪ್ರವೀಣ್ ಕಳೆದ ವರ್ಷ ನಡೆದ ಅಬುಧಾಬಿಯಲ್ಲಿ ನಡೆದ ಸಿಂಥಿನ್ ಟಿ10 ಟೂರ್ನಿಯಲ್ಲಿ ಭಾಗಿಯಾಗಿದ್ದರು. ಬಿಸಿಸಿಐ ನಿಯಮಗಳ ಅನ್ವಯ ಯಾವುದೇ ಕ್ರಿಕೆಟ್ ಆಟಗಾರ ಟೀಂ ಇಂಡಿಯಾ ಅಥವಾ ಐಪಿಎಲ್ ಆಡಬೇಕು ಎಂದರೆ ವಿದೇಶಿ ಕ್ರಿಕೆಟ್ ಟೂರ್ನಿಗಳಲ್ಲಿ ಭಾಗವಹಿಸುವಂತಿಲ್ಲ. ಒಂದೊಮ್ಮೆ ಭಾಗವಹಿಸಿದ್ದರೂ ಬಿಸಿಸಿಐನಿಂದ ಎನ್‍ಒಸಿ ಪಡೆದುಕೊಳ್ಳಬೇಕೆಂಬ ಷರತ್ತು ವಿಧಿಸಲಾಗಿದೆ. ಆದರೆ ಪ್ರವೀಣ್ ತಾಂಬೆ ಬಿಸಿಸಿಐ ನಿಯಮಗಳನ್ನು ಉಲ್ಲಂಘನೆ ಮಾಡಿರುವ ಕಾರಣ ಸದ್ಯ ಐಪಿಎಲ್‍ಗೆ ದೂರವಾಗಿದ್ದಾರೆ.

ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ಈ ಕುರಿತು ಮಾಹಿತಿ ನೀಡಿದ್ದು, ಭಾರತೀಯ ಕ್ರಿಕೆಟ್ ಆಟಗಾರರು ಐಪಿಎಲ್ ಆಡಲು ಇಷ್ಟಪಟ್ಟರೆ ವಿದೇಶಿ ಟೂರ್ನಿಗಳಲ್ಲಿ ಆಡುವಂತಿಲ್ಲ. ಐಪಿಎಲ್ ಬೇಡ ಎಂದರೆ ಅವರು ಯಾವ ಟೂರ್ನಿ ಬೇಕಾದರೂ ಆಡಬಹುದು. ಪ್ರವೀಣ್ ಅಬುಧಾಬಿಯಲ್ಲಿ ನಡೆದ ಟಿ10 ಲೀಗ್‍ಗೆ ಆಟಗಾರರ ಡ್ರಾಫ್ಟ್ ಲಿಸ್ಟ್ ನಲ್ಲಿ ಹೆಸರು ಕಳುಹಿಸಿದ್ದರು. ಇದೇ ವೇಳೆ ಐಪಿಎಲ್ ಟೂರ್ನಿಗೂ ಹೆಸರು ನೀಡಿದ್ದರು. ಆದ್ದರಿಂದ ಅವರನ್ನು ಐಪಿಎಲ್‍ನಿಂದ ದೂರ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಈ ಹಿಂದೆ ಪ್ರವೀಣ್ ತಾಂಬೆ ರಾಜಸ್ಥಾನ್ ರಾಯಲ್ಸ್, ಗುಜರಾತ್ ಲಯನ್ಸ್, ಹೈದರಾಬಾದ್ ತಂಡಗಳ ಪರ ಆಡಿದ್ದರು. 2013ರಲ್ಲಿ ಐಪಿಎಲ್‍ನಲ್ಲಿ ಪಾದಾರ್ಪಣೆ ಮಾಡಿರುವ ಪ್ರವೀಣ್ ಇದುವರೆಗೂ 33 ಪಂದ್ಯಗಳಿಂದ 28 ವಿಕೆಟ್ ಪಡೆದಿದ್ದಾರೆ.

Comments

Leave a Reply

Your email address will not be published. Required fields are marked *