ಅತ್ತ ಸಿಎಂ ಹೆಚ್‍ಡಿಕೆ ರಿಲ್ಯಾಕ್ಸ್-ಇತ್ತ ಅನ್ನದಾತನಿಗೆ ಕೋರ್ಟ್ ವಾರೆಂಟ್

ತುಮಕೂರು: ರಾಜ್ಯದಲ್ಲಿ ಭೀಕರ ಬರಗಾಲ ಬಂದು ಜನ- ಜಾನುವಾರುಗಳ ಸ್ಥಿತಿ ನೋಡಲು ಆಗುತ್ತಿಲ್ಲ. ಟೀಕೆ ಟಿಪ್ಪಣಿಗಳ ನಡುವೆ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮಡಿಕೇರಿಯ ಇಬ್ಬನಿ ರೆಸಾರ್ಟಿನಲ್ಲಿ ರಿಲ್ಯಾಕ್ ಮೂಡ್‍ನಲ್ಲಿದ್ದಾರೆ. ಇದೆಲ್ಲದರ ನಡುವೆ ಸಾಲಮನ್ನಾ ಇನ್ನೂ ಜಾರಿಯಾಗದೇ ರೈತ ಬ್ಯಾಂಕ್‍ಗಳಿಂದ ಬರೋ ನೋಟಿಸ್ ನೋಡಿ ಕಂಗಾಲಾಗುತ್ತಿದ್ದಾನೆ.

ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರ್ಕಾರ ಬಂದು ಹತ್ರತ್ರ 1 ವರ್ಷ ಆಗುತ್ತಾ ಬಂತು. ಇದರ ನಡುವೆ ಸಿಎಂ ಕುಮಾರಸ್ವಾಮಿ ರೈತರ ಸಾಲಮನ್ನಾ ಮಾಡ್ತೀನಿ. ಅನ್ನದಾತರ ಮನೆ ಬಾಗಿಲಿಗೆ ಋಣಮುಕ್ತ ಪತ್ರ ಕಳುಹಿಸುತ್ತೇನೆ ಎಂಬ ಭರವಸೆಯನ್ನು ನೀಡಿದ್ದರು. ರೈತರಿಗೆ ಸಾಲ ಮರುಪಾವತಿ ಮಾಡುವಂತೆ ಬ್ಯಾಂಕ್‍ನವರು ಒತ್ತಡ ಹಾಕಬಾರದು ಎಂದೂ ತಾಕೀತು ಮಾಡಿದ್ದೇನೆ ಎಂದು ಹೇಳಿದ್ದರು. ಆದ್ರೆ ಸಾಲಮನ್ನಾ ಬಿಡಿ, ಸಿಎಂ ವಾಗ್ದಾನ ಮಾಡಿದ ಋಣಮುಕ್ತ ಪತ್ರ ಇನ್ನೂ ರೈತರಿಗೆ ತಲುಪಿಲ್ಲ. ಈ ನಡುವೆ ರೈತರ ಮೇಲೆ ಬ್ಯಾಂಕ್ ಗಳ ದಬ್ಬಾಳಿಕೆ ಮುಂದುವರೆದಿದೆ.

ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಹೊಸಳ್ಳಿಯ ರೈತ ರಾಜಣ್ಣಗೆ ಕೋಲ್ಕತ್ತಾ ಕೋರ್ಟನಿಂದ ವಾರಂಟ್ ಜಾರಿಯಾಗಿದೆ. ರಾಜಣ್ಣ ಮಾಗ್ಮಾ ಫೈನಾನ್ಸ್‍ನಿಂದ ಟ್ರಾಕ್ಟರ್ ಖರೀದಿಸಲು 4 ಲಕ್ಷ ಸಾಲ ಪಡೆದಿದ್ದರು. ಇದೂವರೆಗೆ ಸರಿಸುಮಾರು 3 ಲಕ್ಷ ರೂಪಾಯಿ ಸಾಲ ಮರುಪಾವತಿ ಮಾಡಿದ್ದಾರೆ. ಸತತ ಬರಗಾಲ, ಕೈ ಕೊಟ್ಟ ಬೋರ್‍ವೆಲ್‍ನಿಂದಾಗಿ ಉಳಿದ ಕಂತು ಕಟ್ಟಲು ಸಾಧ್ಯವಾಗಿಲ್ಲ. ಇದರಿಂದಾಗಿ ಮಾಗ್ಮಾ ಫೈನಾನ್ಸ್, ಕೋಲ್ಕತ್ತಾದ ಕೋರ್ಟಿನಲ್ಲಿ ದೂರು ದಾಖಲಿಸಿದೆ. ಕೋರ್ಟ್ ಗೆ ಹಾಜರಾಗೋದು ಕಷ್ಟವಾಗಿದ್ದಕ್ಕೆ ವಾರಂಟ್ ಜಾರಿಯಾಗಿದೆ.

6 ತಿಂಗಳ ಕಾಲಾವಕಾಶದಲ್ಲಿ ಎರಡು ಕಂತುಗಳಲ್ಲಿ ಲೋನ್ ಕ್ಲೀಯರ್ ಮಾಡುತ್ತೇನೆ ಎಂದು ರಾಜಣ್ಣ ಮನವಿ ಮಾಡಿಕೊಂಡಿದ್ದಾರೆ. ಆದರೂ ವಾರಂಟ್ ಹಿಡಿದು ಬಂದ ಗುಬ್ಬಿ ಪೊಲೀಸರು ರಾಜಣ್ಣಗೆ ಪದೇ ಪದೇ ಹೆದರಿಸುತ್ತಿದ್ದಾರೆ ಎಂದು ಹೇಳಲಾಗಿದೆ.

Comments

Leave a Reply

Your email address will not be published. Required fields are marked *