ಎಳೆ ಹಸುಗೂಸನ್ನು ಉಸಿರುಗಟ್ಟಿಸಿ ಕೊಂದೇ ಬಿಟ್ಳು ಅಜ್ಜಿ!

ಮುಂಬೈ: ಮಗುವಿನ ಚಿಕಿತ್ಸೆಗೆ ಹಾಗೂ ಇತರೆ ಕೆಲಸಗಳಿಗೆ ಹಣ ಇಲ್ಲವೆಂದು ಅಜ್ಜಿ ತನ್ನ ಮೂರು ತಿಂಗಳ ಎಳೆ ಹಸುಗೂಸನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದ ಕೋಲ್ಹಾಪುರದಲ್ಲಿ ನಡೆದಿದೆ.

ರಾಜರಾಂಪುರಿ ಪೊಲೀಸರು ಕೊಲೆ ಮಾಡಿದ್ದ ಅಜ್ಜಿಯನ್ನು ಬಂಧಿಸಿದ್ದಾರೆ. ಮಹೋಬಾತ್ಬಿ ಅಡಮ್ ಮುಲ್ಲಾ ಮಗುವನ್ನು ಕೊಂದ ಆರೋಪಿ. ಮಹೋಬ್ಬಾತಿ ಕಾರ್ಮಿಕಳಾಗಿ ಕೆಲಸ ಮಾಡುತ್ತಿದ್ದು, ಆಕೆಯನ್ನು ಬಂಧಿಸಿ ಸೋಮವಾರ ಸ್ಥಳೀಯ ನ್ಯಾಯಾಲಯದಲ್ಲಿ ಒಪ್ಪಿಸಲಾಗಿದೆ. ಆರೋಪಿಯನ್ನು ನ್ಯಾಯಾಲಯ ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ.

ಶನಿವಾರ ಬೆಳಿಗ್ಗೆ ಛತ್ರಪತಿ ಪ್ರಮಿಳಾ ರಾಜೇ ಸಿವಿಲ್ ಆಸ್ಪತ್ರೆಗೆ ಮಗುವನ್ನು ಪೋಷಕರು ದಾಖಲಿಸಿದ್ದಾರೆ. ಡಾಕ್ಟರ್ ಪರೀಕ್ಷಿಸಿದಾಗ ಮಗುವಿನ ಕುತ್ತಿಗೆಯ ಭಾಗದಲ್ಲಿ ಗುರುತುಗಳು ಕಾಣಿಸಿಕೊಂಡಿತ್ತು. ಮರಣೋತ್ತರ ಪರೀಕ್ಷೆಯ ವೇಳೆ ಮಗುವನ್ನು ಕೊಲೆ ಮಾಡಲಾಗಿದೆ ಎನ್ನುವ ಫಲಿತಾಂಶ ಬಂದ ಹಿನ್ನೆಲೆಯಲ್ಲಿ ತನಿಖೆಗೆ ಇಳಿದಾಗ ಈ ಕೊಲೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ಮರಣೋತ್ತರ ಪರೀಕ್ಷೆಯ ವರದಿಯನ್ನು ಡಾಕ್ಟರ್‍ನಿಂದ ಪಡೆದುಕೊಂಡ ಬಳಿಕ ಕುಟುಂಬದ ಸದಸ್ಯರನ್ನು ಈ ವಿಚಾರವಾಗಿ ಪ್ರಶ್ನಿಸಿದ್ದಾರೆ. ಈ ವೇಳೆ ಮಹೋಬಾತ್ಬಿಯ ನಡವಳಿಕೆಯಿಂದಾಗಿ ಆಕೆಯನ್ನು ಭಾನುವಾರ ಬಂಧಿಸಲಾಗಿದ್ದು, ವಿಚಾರಣೆ ಒಳಪಡಿಸಿದಾಗ ತಾನೇ ಈ ಕೃತ್ಯ ಎಸಗಿರುವುದಾಗಿ ತಪ್ಪನ್ನು ಒಪ್ಪಿಕೊಂಡಿದ್ದಾಳೆ.

ಏನಿದು ಪ್ರಕರಣ?
ಆಗ ತಾನೇ ಜನಿಸಿದ್ದ ಮಗು ಅನಾರೋಗ್ಯದಿಂದ ಬಳಲುತಿತ್ತು. ಹೀಗಾಗಿ ಎರಡು ತಿಂಗಳ ಕಾಲ ಮಗುವನ್ನು ಸಿಪಿಆರ್ ಸಿವಿಲ್ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿಡಲಾಗಿತ್ತು. ಎರಡು ತಿಂಗಳ ಬಳಿಕ ಆಸ್ಪತ್ರೆಯಿಂದ ಬಿಡುಗಡೆಯಾದ ಮಗು 1,600 ಗ್ರಾಂ ತೂಕವನ್ನು ಇತ್ತು. ಮಹೋಬಾತ್ಬಿ ಅಡಮ್ ಮುಲ್ಲಾ ಮತ್ತು ಆಕೆಯ ಮಗ ಶಬ್ಬೀರ್ ಕೂಲಿಕಾರರಾಗಿದ್ದರು. ಆದರೆ ಮಗಳನ್ನು ನೋಡಿಕೊಳ್ಳಲು ಶಬ್ಬೀರ್ ತನ್ನ ಕೆಲಸವನ್ನು ಕಳೆದುಕೊಳ್ಳಬೇಕಾಯಿತು. ಹೀಗಾಗಿ ಮಹೋಬಾತ್ಬಿ ಒಬ್ಬಳೇ ಕುಟುಂಬ ನಿರ್ವಹಣೆ ಜವಾಬ್ದಾರಿ ಹೊರಬೇಕಾಗಿತ್ತು.

ಈ ಎಲ್ಲದರ ಮಧ್ಯೆ ಮಗುವಿನ ಆರೋಗ್ಯ ಸುಧಾರಿಸಲು ಹಾಲಿನ ಪುಡಿ ಮತ್ತು ಇತರ ಔಷಧಿಗಳನ್ನು ಖರೀದಿಸಬೇಕಿತ್ತು. ಮಗುವಿನ ಜನನದಿಂದಲೇ ನಾವು ಈಗ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದೇವೆ ಎಂದು ಭಾವಿಸಿ ಮಹೋಬಾತ್ಬಿ ಕಂದಮ್ಮನನ್ನು ಕೊಲೆ ಮಾಡಿದ್ದಾಳೆ.

ಮಹೋಬಾತ್ಬಿ ಮೇಲೆ ಐಪಿಸಿ ಸೆಕ್ಷನ್ 302 ಮತ್ತು 201 ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *