ಮಕ್ಳಾಗಿಲ್ಲ ಅಂದ್ರೆ ದೆವ್ವ ಮೆಟ್ಕೊಂಡಿದೆ ಅಂತಾನೆ- ವಶೀಕರಣ ಮಾಡಿ ವಂಚಿಸ್ತಾನೆ ಕಳ್ ಸ್ವಾಮಿ

– ಛಾಟಿಯೇಟು ಕೊಟ್ಟು ಮಹಿಳೆಯರಿಗೆ ಚಿತ್ರಹಿಂಸೆ

ಕೋಲಾರ: ಆತ ಖ್ಯಾತ ಜ್ಯೋತಿಷಿಯೂ ಅಲ್ಲ, ಮಂತ್ರ- ತಂತ್ರ ಗೊತ್ತಿರುವ ಕೊಳ್ಳೆಗಾಲದ ಸ್ವಾಮೀಜಿನೂ ಅಲ್ಲ. ಆದರೂ ದಿಢೀರ್‌ನೆ ದೆವ್ವ ಬಿಡಿಸೋ ಶಕ್ತಿ ಇರೋ ಕಳ್ಳ ಸ್ವಾಮಿ. ಅಮಾಯಕ ಹೆಣ್ಣು ಮಕ್ಕಳಿಗೆ ದೆವ್ವ ಮೈಮೇಲೆ ಇದೆ ಎಂದು ಹೊಡೆದು, ಬಡೆದು ಚಿತ್ರ ಹಿಂಸೆ ಕೊಟ್ಟು ಕೋಲಾರದ ಸ್ವಘೋಷಿತ ಸ್ವಾಮೀಜಿಯೋರ್ವ ಕಾಟ ಕೊಟ್ಟಿದ್ದಾನೆ.

ಕೋಲಾರ ತಾಲೂಕಿನ ಅಬ್ಬಣಿ ಗ್ರಾಮದ ಕಾಳಿಕಾಂಬ ದೇವಾಲಯದಲ್ಲಿ ಮಲ್ಲಿಕಾರ್ಜುನ ಸ್ವಾಮೀಜಿ ಈ ರೀತಿ ಮಹಿಳೆಯರಿಗೆ ಚಿತ್ರಹಿಂಸೆ ಕೊಡುತ್ತಿದ್ದಾನೆ. ಮಹಿಳೆಯರ ಮೇಲೆ ದೆವ್ವ ಬಂದಿದೆ ಅಂತ ಮನಸ್ಸೋ ಇಚ್ಛೆ ಛಾಟಿಯಿಂದ ಹೊಡೆಯೋದಕ್ಕೆನೇ ಈ ಮಲ್ಲಿಕಾರ್ಜುನ ಸ್ವಾಮೀಜಿ ಫೇಮಸ್. ದೆವ್ವ ಬಿಡಿಸುವ ನೆಪದಲ್ಲಿ ಈತ ಮಹಿಳೆಯನ್ನ ಛಾಟಿಯಿಂದ ಹೊಡೆದು ಮಾನಸಿಕ, ದೈಹಿಕವಾಗಿ ಚಿತ್ರಹಿಂಸೆ ಕೊಡುತ್ತಾನೆ.

ಈ ಮಲ್ಲಿಕಾರ್ಜುನ ಸ್ವಾಮೀಜಿ ಸ್ವಯಂ ಘೋಷಿತ ಸ್ವಾಮೀಜಿಯಾಗಿದ್ದು, ಇತ್ತೀಚೆಗೆ ಅಬ್ಬಣಿಯಲ್ಲಿ ಕಾಳಿಕಾಂಬ ದೇವಾಲಯವನ್ನು ನಿರ್ಮಿಸಿಕೊಂಡಿದ್ದಾನೆ. ತನ್ನ ಬಳಿ ಬರುವ ಮಹಿಳೆಯರಿಗೆ ದೆವ್ವ ಬಿಡಿಸುವ ಕೆಲಸ ಮಾಡುತ್ತಾನೆ. ಮಕ್ಕಳಾಗಿಲ್ಲ ಎಂದು ದೇವರಿಗೆ ಹರಕೆ ಹೊತ್ತು ಬರುವ ಭಕ್ತಾದಿಗಳ ಬಳಿ ನಿಮಗೆ ದೆವ್ವ ಹಿಡಿದಿದೆ, ಅದನ್ನು ಹೋಗಿಸಬೇಕು. ಆಗ ಮಾತ್ರ ನಿಮಗೆ ಒಳ್ಳೆಯದಾಗುತ್ತೆ ಎಂದು ಛಾಟಿಯಿಂದ ಮನಸ್ಸೋ ಇಚ್ಛೆ ಹೊಡೆಯುತ್ತಾನೆ.

ಮಲ್ಲಿಸ್ವಾಮಿ ದೇಗುಲಕ್ಕೆ ಬಂದ ಮಹಿಳೆಯರಿಗೆ ಛಾಟಿಯಲ್ಲಿ ಹೊಡೆಯುವ ದೃಶ್ಯಗಳು ಪಬ್ಲಿಕ್ ಟಿವಿಗೆ ದೊರೆತಿದೆ. ಈತ ಕಳೆದ ಕೆಲವು ವರ್ಷಗಳಿಂದ ಮಾಟ ಮಂತ್ರ-ತಂತ್ರ ಮಾಡುವುದು, ವಶೀಕರಣದ ಮೂಲಕ ಅಮಾಯಕ ಮಹಿಳೆಯರನ್ನ ವಂಚಿಸುತ್ತಿದ್ದಾನೆ. ಅಲ್ಲದೆ ತನ್ನ ಬಳಿ ಬರುವ ಮಹಿಳೆಯರಿಗೆ ಕೆಲವು ವಾಗ್ದಾನಗಳನ್ನ ನೀಡಿ ಸಂಸಾರಗಳನ್ನ ಹಾಳು ಮಾಡಿದ್ದಾನೆ. ಮಹಿಳೆಯರಿಗೆ ವಶೀಕರಣ ಆಗಿದೆ. ನೀನು ನಿನ್ನ ಗಂಡನನ್ನ ಬಿಟ್ಟು ಕೆಲವು ತಿಂಗಳು ದೂರ ಇರು ಎಂದು ಭೀತಿ ಹುಟ್ಟಿಸಿ, ಸಂಸಾರ ಒಡೆಯುತ್ತಿದ್ದಾನೆ.

21ನೇ ಶತಮಾನದಲ್ಲೂ ಹೀಗೆ ದೆವ್ವ, ಗಾಳಿ ಎಂದು ನಂಬಿ ಇಂತಹ ಕಳ್ಳ ಸ್ವಾಮೀಜಿಗಳ ಮಾತಿಗೆ ಮಹಿಳೆಯರು ಮರಳಾಗುತ್ತಿರುವುದು ದುರಂತವೇ ಸರಿ. ದೆವ್ವ ಆದರೆ ಹೋಗು ಎಂದು ಮಹಿಳೆಯನ್ನ ಛಾಟಿಯಲ್ಲಿ ಹೊಡೆಯುವ ಮಲ್ಲಿ ಸ್ವಾಮಿಯ ಭಕ್ತರಂತೂ ಇದೇನು ಕರ್ಮ ಎನ್ನುತ್ತಿದ್ದಾರೆ.

Comments

Leave a Reply

Your email address will not be published. Required fields are marked *