ಕೋಲಾರ, ಮಂಡ್ಯದಲ್ಲಿ ಬೀಗರೂಟ ಕ್ಯಾನ್ಸಲ್

ಕೋಲಾರ/ಮಂಡ್ಯ: ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮದುವೆ, ಔತಣ ಕೂಟ ಮುಂತಾದ ಹೆಚ್ಚು ಜನ ಸೇರುವ ಕಾರ್ಯಕ್ರಮಗಳನ್ನು ರದ್ದು ಮಾಡಬೇಕು ಎಂದು ಶುಕ್ರವಾರ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಕೋಲಾರ ಹಾಗೂ ಮಂಡ್ಯದಲ್ಲಿ ನಡೆಯಬೇಕಿದ್ದ ಬೀಗರ ಊಟವನ್ನು ಕ್ಯಾನ್ಸಲ್ ಮಾಡಲಾಗಿದೆ.

ಕೋಲಾರ ತಾಲೂಕಿನ ಅರಾಬಿಕೊತ್ತನೂರು ಗ್ರಾಮದ ಬಳಿ ಜೆಡಿಎಸ್ ಮುಖಂಡ ನಂಜುಂಡಗೌಡ ಪುತ್ರನ ವಿವಾಹದ ಪ್ರಯುಕ್ತ ಬಾಡೂಟ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದರು. ಆದರೆ ನಾಳೆ ನಡೆಯಬೇಕಿದ್ದ ಈ ಬೀಗರೂಟ ಕಾರ್ಯಕ್ರಮ ರದ್ದಾಗಿದೆ. 30 ಕೆ.ಜಿ ಕುರಿ, 50 ಕ್ವಿಂಟಾಲ್ ಕೋಳಿಯ ಬೃಹತ್ ಬಾಡೂಟಕ್ಕೆ ಸಿದ್ಧತೆ ನಡೆಸಲಾಗಿತ್ತು. ಲಕ್ಷಾಂತರ ರೂ. ಖರ್ಚು ಮಾಡಿ ಬಾಡೂಟ ಕಾರ್ಯಕ್ರಮ ಆಯೋಜನೆ ಮಾಡಿದ್ದವರು ಕಂಗಾಲಾಗಿದ್ದಾರೆ.

ಕಳೆದೊಂದು ವಾರದಿಂದ ಊಟಕ್ಕಾಗಿ ಮೂರು ಎಕರೆ ಪ್ರದೇಶದಲ್ಲಿ ಬೃಹತ್ ಪೆಂಡಾಲ್ ಹಾಕಲಾಗಿತ್ತು. ಈ ಕಾರ್ಯಕ್ರಮಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಮುಖ್ಯ ಅತಿಥಿಯಾಗಿ ಆಗಮಿಸಬೇಕಿದ್ದರು. ಜಿಲ್ಲೆಯಲ್ಲಿ ಮುಂದಿನ ಒಂದು ವಾರ ಯಾವುದೇ ಸಭೆ ಸಮಾರಂಭ ಇಲ್ಲ. ಜಾತ್ರೆ, ಉತ್ಸವ, ಮದುವೆ, ಸಂತೆ ಆಯೋಜನೆಗೆ ಜಿಲ್ಲಾಧಿಕಾರಿ ಸಿ ಸತ್ಯಭಾಮ ಆದೇಶಿಸಿದ್ದರಿಂದ ಕಾರ್ಯಕ್ರಮ ರದ್ದಾಗಿದೆ.

ಮಂಡ್ಯದಲ್ಲೂ ಕ್ಯಾನ್ಸಲ್:
ಇತ್ತ ಮಂಡ್ಯದಲ್ಲಿ ಕೂಡ ಕೊರೊನಾ ಭೀತಿ ಹಿನ್ನೆಲೆಯಲ್ಲಿ ನಿಗದಿಯಾಗಿದ್ದ ಬೀಗರ ಔತಣಕೂಟ ಮುಂದೂಡಿಕೆಯಾಗಿದೆ. ನಾಳೆ ಮಂಡ್ಯದ ಗ್ರೀನ್ ಪ್ಯಾಲೇಸ್‍ನಲ್ಲಿ ಬೀಗರೂಟ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಶುಕ್ರವಾರ ಸುಪ್ರೀತ್ ಹಾಗೂ ಶ್ರೀಲಕ್ಷ್ಮೀ ಅವರ ವಿವಾಹವನ್ನು ಅವರ ಪೋಷಕರು ಧರ್ಮಸ್ಥಳದಲ್ಲಿ ಸರಳವಾಗಿ ಶಾಸ್ತ್ರೋಕ್ತವಾಗಿ ಮಾಡಿದ್ದರು. ಆದರೆ ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ನಾಳೆ ನಿಗದಿಯಾಗಿದ್ದ ಬೀಗರ ಊಟವನ್ನು ಮೂಂದೂಡಿಕೆ ಮಾಡಲಾಗಿದೆ ಎಂದು ವರ ಸುಪ್ರೀತ್ ತಂದೆ ಮಾಧು ಪಬ್ಲಿಕ್ ಟಿವಿಗೆ ಹೇಳಿದ್ದಾರೆ.

ಸರ್ಕಾರದ ಆದೇಶವನ್ನ ಸ್ವಾಗತಿಸುತ್ತೇವೆ. ಜನರ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಬೀಗರ ಔತಣಕೂಟಕ್ಕಾಗಿ ನಾವು ಎಲ್ಲಾ ತಯಾರಿ ಮಾಡಿದ್ದೆವು. ಆದರೆ ಸರ್ಕಾರ ನೂರಕ್ಕೂ ಹೆಚ್ಚು ಜನರನ್ನ ಸೇರಿಸಿ ಕಾರ್ಯಕ್ರಮ ಮಾಡುವಂತಿಲ್ಲ ಎಂದು ಆದೇಶ ಮಾಡಿದೆ. ಹೀಗಾಗಿ ಬೀಗರ ಊಟಕ್ಕೆ ಎರಡು ಸಾವಿರಕ್ಕೂ ಹೆಚ್ಚು ಜನ ಸೇರುತ್ತಿದ್ದರಿಂದ ಕಾರ್ಯಕ್ರಮವನ್ನ ಮುಂದೂಡಲಾಗಿದೆ. ಆಹ್ವಾನ ನೀಡಿದವರಿಗೆಲ್ಲಾ ಕಾರ್ಯಕ್ರಮ ಮುಂದೂಡಿದ ಬಗ್ಗೆ ಮಾಹಿತಿ ನೀಡಿದ್ದೇವೆ. ಕಾರ್ಯಕ್ರಮಕ್ಕಾಗಿ ಎಲ್ಲಾ ತಯಾರಿ ಮಾಡಿಕೊಂಡು ಅಡುಗೆಯವರಿಗೆ, ಸಮುದಾಯದ ಭವನದವ್ರಿಗೆ ಎಲ್ಲರಿಗೂ ಅಡ್ವಾನ್ಸ್ ನೀಡಲಾಗಿತ್ತು. ಈಗ ಕಾರ್ಯಕ್ರಮ ಮುಂದೂಡುವುದರಿಂದ ಅಡ್ವಾನ್ಸ್ ಪಡೆದವರೆಲ್ಲಾ ಸಹಕರಿಸುವುದಾಗಿ ತಿಳಿಸಿದ್ದಾರೆ. ತಂದೆಯಾಗಿ ಮಗನ ಮದುವೆ ಊಟ ಹಾಕಿಸಬೇಕೆಂಬ ಆಸೆ ಸಹಜವಾಗೆ ಇದೆ. ಆದರೆ ಸರ್ಕಾರದ ಆದೇಶಕ್ಕೆ ತಲೆಬಾಗಿದ್ದೇನೆ ಎಂದು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *