ಕೇಂದ್ರ ಸರ್ಕಾರ ಹೈನುಗಾರಿಕೆಯ ಮೇಲೆ ಬರೆ ಎಳೆಯುತ್ತಿದೆ: ರೈತರ ಆರೋಪ

ಕೋಲಾರ: ಕೇಂದ್ರ ಸರ್ಕಾರ ಆರ್‌ಸಿಇಪಿ (Regional Comprehensive Economic Partnership) ಒಪ್ಪಂದಕ್ಕೆ ಸಹಿ ಮಾಡುವ ಮೂಲಕ ದೇಶದ ಲಕ್ಷಾಂತರ ಅನ್ನದಾತರ ಜೀವನಾಡಿಯಾಗಿರುವ ಹೈನುಗಾರಿಕೆಯ ಮೇಲೆ ಬರೆ ಎಳೆಯುತ್ತಿದೆ ಎಂದು ಆರೋಪಿಸಿ ಕೋಲಾರದಲ್ಲಿ ರೈತರು ವಿನೂನತ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಶ್ರೀನಿವಾಸಪುರ ವೃತ್ತದಲ್ಲಿ ಎತ್ತಿನಗಾಡಿ, ಹಸುಗಳು ಹಾಗೂ ಕೈನಲ್ಲಿ ಪೊರಕೆ ಹಿಡಿದು ಕೇಂದ್ರ ಸರ್ಕಾರದ ವಿರುದ್ಧ ರೈತರು ದಿಕ್ಕಾರಗಳನ್ನ ಕೂಗುತ್ತಾ, ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಕೇಂದ್ರ ಸರ್ಕಾರ ವಿದೇಶಿ ಕಂಪನಿಗಳೊಂದಿಗೆ ಆರ್‌ಸಿಇಪಿ ಒಪ್ಪಂದಕ್ಕೆ ಸಹಿ ಹಾಕುವ ನಿರ್ಧಾರವನ್ನ ಖಂಡಿಸಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು 1 ಗಂಟೆ ಕಾಲ ಪ್ರತಿಭಟನೆ ಮಾಡಿದರು.

3 ಕೋಟಿ ಅನ್ನದಾತರು ಜೀವನಾಧಾರವಾಗಿರುವ ಹೈನೋದ್ಯಮವನ್ನ ನಂಬಿ ಇಲ್ಲಿನ ರೈತರು ಜೀವನ ನಡೆಸುತ್ತಿದ್ದು, ವಿದೇಶಿ ಹಾಲಿನ ಆಮದಿನಿಂದಾಗಿ ಸ್ವದೇಶಿ ಹಾಲಿನ ಬೆಲೆ ದಿಢೀರ್ ಕುಸಿಯುತ್ತೆ. ಇದರಿಂದ ಕೃಷಿ, ಹೈನೋದ್ಯಮವನ್ನೇ ನಂಬಿರುವ ರೈತರು ಆತಂಕಕ್ಕೊಳಗಾಗಿದ್ದಾರೆ. ಈ ಒಪ್ಪಂದದಿಂದಾಗಿ ಕೃಷಿ ಕ್ಷೇತ್ರದ ಮೇಲೆ ದುಷ್ಪರಿಣಾಮ ಬೀರುವುದರೊಂದಿಗೆ ರೈತರ ಆತ್ಮಹತ್ಯೆಗಳು ಮತ್ತಷ್ಟು ಹೆಚ್ಚಾಗಲಿವೆ ಎಂದು ಆರೋಪಿಸಿದರು.

ಹೀಗಾಗಿ ಹೈನೋದ್ಯಮಕ್ಕೆ ಮಾರಕವಾಗುವ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವಕ್ಕೆ ಸಹಿ ಹಾಕಬಾರದು ಎಂದು ಒತ್ತಾಯ ಮಾಡಿದರು. ಒಂದು ವೇಳೆ ಒಪ್ಪಂದಕ್ಕೆ ಕೇಂದ್ರ ಸರ್ಕಾರ ಸಹಿ ಹಾಕಿದ್ದೆ ಆದಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನ ತಡೆದು ಪ್ರತಿಭಟನೆ ಮಾಡುವುದರ ಜೊತೆಗೆ, ಸಭೆಗಳಲ್ಲಿ ಆಧಿಕಾರಿಗಳಿಗೆ ಜನಪ್ರತಿನಿಧಿಗಳಿಗೆ ಮಸಿ ಬಳಿಯುವ ಎಚ್ಚರಿಕೆಯನ್ನ ನೀಡಿದರು.

Comments

Leave a Reply

Your email address will not be published. Required fields are marked *