ಮುನಿಯಪ್ಪ ವಿರುದ್ಧ ಆಕ್ರೋಶ – ಕೈ ಸಭೆಯಲ್ಲಿ ಮಾರಾಮಾರಿ

ಕೋಲಾರ: ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಹೊಡೆದಾಡಿಕೊಂಡ ಘಟನೆ ಇಂದು ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಗೌನಿಪಲ್ಲಿ ಗ್ರಾಮದಲ್ಲಿ ನಡೆದಿದೆ.

ಚುನಾವಣೆ ವೇಳೆ ಮಾತ್ರ ಮತ ಕೇಳಲು ಬರುತ್ತೀರಿ? ಮೂಲ ಕಾಂಗ್ರೆಸ್ಸಿಗರನ್ನು ಪರಿಗಣಿಸದೇ ಸಭೆ ಮಾಡಲಾಗುತ್ತಿದೆ. ಕೆ.ಎಚ್.ಮುನಿಯಪ್ಪನವರು ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ ಎಂದು ಗೌನಿಪಲ್ಲಿ ಗ್ರಾಮದ ಕಾಂಗ್ರೆಸ್ ಮುಖಂಡರು, ಸಂಸದರ ಪ್ರಚಾರಕ್ಕೆ ಬಂದಿದ್ದವರ ವಿರುದ್ಧ ನೇರವಾಗಿ ಅಸಮಾಧಾನ ಹೊರ ಹಾಕಿದರು.

ಸಂಸದ ಕೆ.ಎಚ್.ಮುನಿಯಪ್ಪ ಪರ ಪ್ರಚಾರಕ್ಕೆ ಹೋಗಿದ್ದ ಮ್ಯಾಂಗೋ ಬೋರ್ಡ್ ಮಾಜಿ ಅಧ್ಯಕ್ಷ ದಳಸನೂರು ಗೋಪಾಲಕೃಷ್ಣ ಸೇರಿದಂತೆ ಅನೇಕ ಮುಖಂಡರು ಸ್ಥಳೀಯ ಕಾಂಗ್ರೆಸ್ಸಿಗರ ಜೊತೆ ಸಭೆ ನಡೆಸಿದ್ದರು. ಶಾಂತವಾಗಿ ಆರಂಭಗೊಂಡಿದ್ದ ಸಭೆಯಲ್ಲಿ ಸ್ಥಳೀಯರು ಒಬ್ಬೊಬ್ಬರಾಗಿ ಅಸಮಾಧಾನವನ್ನು ಹೊರಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಎರಡೂ ಗುಂಪುಗಳ ಮಧ್ಯೆ ವಾಗ್ದಾಳಿ ನಡೆದಿದ್ದು, ಪರಸ್ಪರ ಕೈ ಕೈ ಮಿಲಾಯಿಸಿದ್ದಾರೆ.

ಮಾರಾಮಾರಿಯಿಂದಾಗಿ ಎಚ್ಚೆತ್ತುಕೊಂಡ ಕೆಲ ಸ್ಥಳೀಯ ಮುಖಂಡರು ಪ್ರಚಾರಕ್ಕೆ ಬಂದಿದ್ದ ನಾಯಕರನ್ನು ರಕ್ಷಿಸಿ ಸಭೆಯಿಂದ ಹೊರಗೆ ಕಳುಹಿಸಿದರು.

Comments

Leave a Reply

Your email address will not be published. Required fields are marked *