ಕೌಟುಂಬಿಕ ಕಲಹ- ತಾಯಿಯ ಕತ್ತು ಕೊಯ್ದು ಬರ್ಬರವಾಗಿ ಹತ್ಯೆಗೈದ ಮಗ

ಕೋಲಾರ: ಕೌಟುಂಬಿಕ ಕಲಹದಿಂದಾಗಿ ಮಗನೊಬ್ಬ ತನ್ನ ತಾಯಿಯನ್ನೇ ಕತ್ತು ಕೊಯ್ದು ಕೊಲೆ ಮಾಡಿರುವ ಘಟನೆ ಜಿಲ್ಲೆಯ ಬಂಗಾರಪೇಟೆ ಪಟ್ಟಣದಲ್ಲಿ ಮಂಗಳವಾರ ನಡೆದಿದೆ.

ಬಂಗಾರಪೇಟೆಯ ಮುದಲಿಯಾರ್ ಲೇಔಟ್‍ನ ನಿವಾಸಿ ಸತ್ಯಲಕ್ಷ್ಮಿ (70) ಕೊಲೆಯಾದ ತಾಯಿ. ಮಂಜುನಾಥ್ (45) ಕೊಲೆಗೈದ ಆರೋಪಿ. ಕೃತ್ಯ ಎಸಗಿದ ಬಳಿಕ ಮಂಜುನಾಥ್ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.

ಮಂಜುನಾಥ್ ಬಂಗಾರಪೇಟೆಯ ಮುದಲಿಯಾರ್ ಲೇಔಟ್ ವಿಬಿಅರ್ ಕಲ್ಯಾಣ ಮಂಟಪದ ಪಕ್ಕದಲ್ಲಿರುವ ಮನೆಯಲ್ಲಿ ವಾಸವಿದ್ದ. ದಸರಾ ಹಬ್ಬಕ್ಕೆಂದು ಆತನ ಪತ್ನಿ ಹಾಗೂ ಮಕ್ಕಳು ಬೆಂಗಳೂರಿನ ಸಂಬಂಧಿಕರ ಮನೆಗೆ ತೆರಳಿದ್ದರು. ಹೀಗಾಗಿ ಮನೆಯಲ್ಲಿ ತಾಯಿ ಸತ್ಯಲಕ್ಷ್ಮಿ ಹಾಗೂ ಮಗ ಮಾತ್ರ ಇದ್ದರು. ಮಂಜುನಾಥ್ ಮಂಗಳವಾರ ಬೆಳಗ್ಗೆ 11 ಗಂಟೆಗೆ ವೃದ್ಧ ತಾಯಿಯ ಕತ್ತು ಕೊಯ್ದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಬಳಿಕ ಅಲ್ಲಿಂದ ಪರಾರಿಯಾಗಿ ರಾತ್ರಿ 8 ಗಂಟೆ ಸುಮಾರಿಗೆ ದೂರು ಸಮೇತ ಬಂಗಾರಪೇಟೆ ಪೊಲೀಸ್ ಠಾಣೆಗೆ ತೆರಳಿದ್ದಾನೆ.

ಹೆತ್ತ ತಾಯಿಯನ್ನೇ ಕೊಲೆ ಮಾಡಿದ್ದಾಗಿ ಹೇಳುತ್ತಿದ್ದ ಮಂಜುನಾಥ್ ಮಾನಸಿಕ ಅಸ್ವಸ್ಥನಿರಬಹುದು ಎಂದು ಪೊಲೀಸರು ತಿಳಿದು ಸುಮ್ಮನಾಗಿದ್ದರು. ಬಳಿಕ ಆತನನ್ನು ವಿಚಾರಣೆ ಮಾಡಿದಾಗ ಕೃತ್ಯ ಖಚಿತವಾಯಿತು. ಅಷ್ಟೇ ಅಲ್ಲದೆ ಆರೋಪಿಯು, ತಾನು ಇನ್ನು ಕೆಲವರನ್ನು ಕೊಲೆ ಮಾಡುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾನೆ. ಜೊತೆಗೆ ಪತ್ನಿ ಹಾಗೂ ಮಕ್ಕಳು ಬೆಂಗಳೂರಿನಿಂದ ಬರಲಿದ್ದು, ಸ್ವಯಂ ವಿಳಾಸ ಸಮೇತ ಪೊಲೀಸರಿಗೆ ಮಂಜುನಾಥ್ ದೂರು ಸಲ್ಲಿಸಿದ್ದಾನೆ.

ಘಟನಾ ಸ್ಥಳಕ್ಕೆ ಕೆಜಿಎಫ್ ಎಸ್‍ಪಿ ಮಹಮ್ಮದ್ ಸುಜೀತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *