ಮಡಿಕೇರಿ ನಗರಕ್ಕೆ ಲಗ್ಗೆಯಿಟ್ಟ ಆನೆಗಳು

ಕೊಡಗು : ಜಿಲ್ಲೆಗೂ ಆನೆ ಹಾವಳಿಗೂ ಅಂಟಿರುವ ನಂಟು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಈವರೆಗೆ ಕಾಡಿನ ಅಂಚಿನ ಗ್ರಾಮಗಳಲ್ಲಿ ಪ್ರತ್ಯಕ್ಷವಾಗಿ ಆತಂಕ ಸೃಷ್ಟಿಸಿದ್ದ ಆನೆಗಳು ಇದೀಗ ಮಡಿಕೇರಿ ನಗರಕ್ಕೂ ಪ್ರವೇಶ ನೀಡಿ ಆತಂಕ ಸೃಷ್ಟಿಸಿವೆ.

ನಗರದಲ್ಲಿ ಪ್ರವೇಶ ಮಾಡುವ ಮುನ್ನ ರಾಷ್ಟ್ರೀಯ ಹೆದ್ದಾಯಲ್ಲಿ ಗಜಪಡೆ ಪರೇಡ್ ನಡೆಸಿದ್ದು, ನಂತರದಲ್ಲಿ ನಗರದೊಳಗೆ ಲಗ್ಗೆಯಿಟ್ಟಿವೆ. ಮುಂಜಾನೆಯೇ ಕಾಡಿನಿಂದ ನಗರಕ್ಕೆ ನುಗ್ಗಿದ್ದ ಎರಡು ಆನೆಗಳನ್ನು ಕಂಡ ಸಾರ್ವಜನಿಕರು ಜೀವ ಭಯದಿಂದ ಆತಂಕಗೊಂಡರು. ನಗರದ ಚೈನ್ ಗೇಟ್ ಬಳಿ ಇರುವ ಶಾಸಕ ಕೆ.ಜಿ ಬೋಪಯ್ಯ ಮನೆ ಸಮೀಪ ಬಂದಿದ್ದ ಆನೆಗಳು ಸಿಕ್ಕ ಸಿಕ್ಕಲ್ಲಿ ಅಡ್ಡಾಡುತ್ತ ಹಲವರ ಮನೆಯ ಕಾಂಪೌಂಡ್ ಮುರಿದು ಪುಂಡಾಟವಾಡಿದ್ದವು. ನಂತರ ಚೈನ್ ಗೇಟ್ ಬಳಿ ಇರುವ ಸ್ಮಶಾನದಲ್ಲಿ ಸ್ವಲ್ಪ ಸಮಯ ಬೀಡು ಬಿಟ್ಟಿದ್ದವು.

 

ನಗರಕ್ಕೆ ಆನೆ ಪ್ರವೇಶ ಮಾಡಿರುವ ಮಾಹಿತಿ ತಿಳಿದು ಸ್ಥಳಕ್ಕೆ ಬಂದ 15 ಕ್ಕೂ ಹೆಚ್ಚು ಅರಣ್ಯ ಇಲಾಖೆ ಸಿಬ್ಬಂದಿ, ಆರ್.ಎಫ್.ಓ ವಿಜಯ್ ಕುಮಾರ್ ನೇತೃತ್ವದಲ್ಲಿ ಆನೆಗಳನ್ನು ಕಾಡಿಗಟ್ಟಲು ಹರಸಾಹಸ ಪಟ್ಟರು. ಈ ವೇಳೆ ಆನೆಗಳು ಹೆದ್ದಾರಿಗೆ ಪ್ರವೇಶ ಮಾಡಿದ ಪರಿಣಾಮ ಅರ್ಧ ಗಂಟೆಗೂ ಹೆಚ್ಚು ಸಮಯ ರಾಷ್ಟ್ರೀಯ ಹೆದ್ದಾರಿ 275 ಬಂದ್ ಆಗಿ ವಾಹನ ಸಂಚಾರವೂ ಸ್ಥಗಿತವಾಗಿತ್ತು.

ಸತತ ಎರಡು ಗಂಟೆ ಪ್ರಯಾಸದ ಕಾರ್ಯಾಚರಣೆ ಮೂಲಕ ಆನೆಗಳನ್ನು ನಗರದ ಕಡೆಯಿಂದ ಸಮೀಪದ ಕಾಫಿ ತೋಟದತ್ತ ಅರಣ್ಯ ಇಲಾಖೆ ಸಿಬ್ಬಂದಿ ಓಡಿಸಿಸಲು ಯಶ್ವಸಿಯಾದರು. ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕಾಡಾನೆ ಹಾವಳಿ ಮಿತಿ ಮೀರುತ್ತಿದ್ದರೂ ಸರ್ಕಾರ ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಮುಂದಾಗಿಲ್ಲ, ಪರಿಸ್ಥಿತಿ ಹೀಗೆ ಮುಂದುವರೆದರೆ ಮುಂದೊಂದು ದಿನ ದೊಡ್ಡ ಅನಾಹುತ ನಿರ್ಮಾಣವಾಗುತ್ತೆ ಅಷ್ಟರೊಳಗೆ ಸಮಸ್ಯೆ ಬಗೆಹರಿಸಿ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

https://www.youtube.com/watch?v=clGi-bzZzKw

Comments

Leave a Reply

Your email address will not be published. Required fields are marked *