IPL ಟೂರ್ನಿಯಿಂದ ಕನ್ನಡಿಗ ಕೆ.ಎಲ್‌ ರಾಹುಲ್‌ ಔಟ್‌

ಲಕ್ನೋ: ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಲಕ್ನೋ ಸೂಪರ್‌ ಜೈಂಟ್ಸ್‌ ತಂಡದ ನಾಯಕ ಕೆ.ಎಲ್‌ ರಾಹುಲ್‌ (KL Rahul) 16ನೇ ಆವೃತ್ತಿಯ ಐಪಿಎಲ್‌ (IPL 2023) ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ.

ಜೊತೆಗೆ ಆಸ್ಟ್ರೇಲಿಯಾ (Australia) ವಿರುದ್ಧ ಜೂನ್‌ 7 ರಂದು ಲಂಡನ್‌ನಲ್ಲಿ ನಡೆಯಲಿರುವ ವಿಶ್ವಟೆಸ್ಟ್‌ ಚಾಂಪಿಯನ್‌ ಶಿಪ್‌ ಫೈನಲ್‌ (WTC) ಪಂದ್ಯಕ್ಕೂ ಲಭ್ಯರಾಗುವ ಅನುಮಾನ ಮೂಡಿದೆ. ಇದನ್ನೂ ಓದಿ: ಲಕ್ನೋಗೆ ಡಬಲ್‌ ಶಾಕ್‌ – ಕೆ.ಎಲ್‌ ರಾಹುಲ್‌ IPL ಟೂರ್ನಿಯಿಂದಲೇ ಔಟ್‌?

ವೈದ್ಯಕೀಯ ತಂಡದ ಸಲಹೆಯ ಮೇರೆಗೆ ಶೀಘ್ರದಲ್ಲೇ ನಾನು ತೊಡೆ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತೇನೆ. ಮುಂದಿನ ವಾರಗಳಲ್ಲಿ ಪುನಶ್ಚೇತನ ಕಾರ್ಯದಲ್ಲಿ ತೊಡಗಲಿದ್ದು, ಆದಷ್ಟು ಬೇಗ ಗುಣಮುಖನಾಗುವ ಕಡೆಗೆ ಗಮನಹರಿಸುತ್ತೇನೆ. ಆದ್ರೆ ಈ ಬಾರಿ ಐಪಿಎಲ್‌ನಿಂದ ದೂರ ಉಳಿಯುತ್ತಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ. ನಾಯಕನಾಗಿ ಟೂರ್ನಿಯ ನಿರ್ಣಾಯಕ ಅವಧಿಯಲ್ಲಿ ತಂಡದ ಜೊತೆ ಇರಲು ಸಾಧ್ಯವಾಗದೇ ಇರುವುದರಿಂದ ನನಗೆ ತುಂಬಾ ನೋವಾಗುತ್ತಿದೆ ಎಂದು ಕೆ.ಎಲ್ ರಾಹುಲ್‌ ತಮ್ಮ ಇನ್ಸ್ಟಾಗ್ರಾಮ್‌ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಮುಂದಿನ ಪಂದ್ಯಗಳಲ್ಲಿ ನಮ್ಮ ಹುಡುಗರು ಅತ್ಯುತ್ತಮ ಪ್ರದರ್ಶನ ತೋರುವ ಮೂಲಕ ತಂಡಕ್ಕೆ ಆಸರೆಯಾಗಲಿದ್ದಾರೆಂಬ ಬಗ್ಗೆ ನನಗೆ ಸಂಪೂರ್ಣನಂಬಿಕೆ ಇದೆ. ಪ್ರತಿಯೊಂದು ಪಂದ್ಯವನ್ನು ವೀಕ್ಷಿಸುವ ಮೂಲಕ ತಂಡವನ್ನು ಹುರಿದುಂಬಿಸುತ್ತೇನೆ ಎಂದು ರಾಹುಲ್‌ ಹೇಳಿದ್ದಾರೆ. ಇದನ್ನೂ ಓದಿ: ಯಾರಾದ್ರು ಕೊಟ್ರೆ ನಾವೂ ತಿರುಗಿಸಿ ಕೊಡ್ತೀವಿ – ಮತ್ತೆ ಗಂಭೀರ್‌ಗೆ ಕೌಂಟರ್‌ ಕೊಟ್ಟ ಕಿಂಗ್‌ ಕೊಹ್ಲಿ

ಇದೇ ಮೇ 1ರಂದು ರಾಯಲ್‌ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ವಿರುದ್ಧದ ಪಂದ್ಯದ ವೇಳೆ ಬೌಂಡರಿ ತಡೆಯುವ ಪ್ರಯತ್ನದಲ್ಲಿ ಕೆ.ಎಲ್‌ ರಾಹುಲ್ ಬೌಂಡರಿ ತಡೆಯಲು ಮುಂದಾದಾಗ ನೆಲಕ್ಕೆ ಉರುಳಿದ್ದರು. ಈ ವೇಳೆ ಅವರು ಸ್ನಾಯು ಸೆಳೆತದ ಗಾಯಕ್ಕೆ ತುತ್ತಾಗಿದ್ದರು. ನೋವು ತಾಳಲಾರದೆ ಅವರು, ತಮ್ಮ ತಂಡದ ಸಹಾಯಕ ಸಿಬ್ಬಂದಿ ನೆರವಿನಿಂದ ಮೈದಾನ ತೊರೆದಿದ್ದರು.

ಇದಾದ ಬಳಿಕ ಅವರು ಫೀಲ್ಡಿಂಗ್‌ಗೆ ಮರಳಲೇ ಇಲ್ಲ. ಕೊನೆಗೆ 19ನೇ ಓವರ್‌ನಲ್ಲಿ ಇನ್ನೂ ಮೂರು ಎಸೆತಗಳು ಬಾಕಿಯಿದ್ದಾಗ ಮತ್ತೆ ನೋವಿನಲ್ಲೂ ಕಣಕ್ಕಿಳಿದಿದ್ದರು. ಮೂರು ಎಸೆತಗಳನ್ನ ಎದುರಿಸಿದರೂ ಯಾವುದೇ ರನ್‌ ಕದಿಯಲು ಆಗಲಿಲ್ಲ. ಗಾಯಕ್ಕೆ ತುತ್ತಾಗಿದ್ದ ಕೆ.ಎಲ್‌ ರಾಹುಲ್ ಅವರನ್ನ ಲಕ್ನೋ ಫ್ರಾಂಚೈಸಿಯಿಂದ ಬಿಸಿಸಿಐ ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿತ್ತು. ಇದೀಗ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದು, ಐಪಿಎಲ್‌ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಲಕ್ನೋ ಸೂಪರ್‌ ಜೈಂಟ್ಸ್‌ ತಂಡವೂ ಅಧಿಕೃತ ಟ್ವಿಟ್ಟರ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ.