ಪ್ರತಿಭಟನಾನಿರತ ರೈತರ ಮೇಲೆ ಪೊಲೀಸರಿಂದ ಜಲಫಿರಂಗಿ, ಅಶ್ರುವಾಯು ಪ್ರಯೋಗ!

ನವದೆಹಲಿ: ಸಾಲಮನ್ನಾ ಸೇರಿ 15 ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ಉತ್ತರಪ್ರದೇಶದ ಸುಮಾರು 70 ಸಾವಿರ ರೈತರು ಹರಿದ್ವಾರದಿಂದ ದೆಹಲಿ ಚಲೋ ಪ್ರತಿಭಟನೆ ಹಮ್ಮಿಕೊಂಡಿದ್ದರು. ಇದನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ, ದೆಹಲಿ ಹಾಗೂ ಉತ್ತರಪ್ರದೇಶ ಗಡಿ ಭಾಗದಲ್ಲಿ ರೈತರ ಮೇಲೆ ದಾಳಿ ನಡೆಸಿದೆ.

ಹೌದು, ಸುಮಾರು 70 ಸಾವಿರಕ್ಕೂ ಹೆಚ್ಚು ರೈತರು ಸಾಲಮನ್ನಾ ಹಾಗು 15 ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಇಂದು ದೆಹಲಿ ಚಲೋ ಪ್ರತಿಭಟನೆಯನ್ನು ಹರಿದ್ವಾರದಿಂದ ಹಮ್ಮಿಕೊಂಡಿದ್ದರು. ಘಾಜಿಯಾಪುರ ಮಾರ್ಗವಾಗಿ ದೆಹಲಿಗೆ ತೆರಳಿ ಪ್ರತಿಭಟನೆ ನಡೆಸಿದ್ದರು. ಆದರೆ ದೆಹಲಿ ಹಾಗೂ ಉತ್ತರ ಪ್ರದೇಶದ ಗಡಿಭಾಗ ಗಾಜೀಯಾಬಾದ್ ನಲ್ಲಿ ಬೃಹತ್ ಬ್ಯಾರಿಕೇಡ್‍ಗಳನ್ನು ಹಾಕುವ ಮೂಲಕ ಕೇಂದ್ರ ಸರ್ಕಾರ ರೈತರ ಪ್ರತಿಭಟನೆಯನ್ನು ನಿಯಂತ್ರಿಸಲು ಯತ್ನಿಸಿದ್ದಾರೆ. ಆದರೆ ಸಾಗರೋಪಾದಿಯಲ್ಲಿ ಬಂದಿದ್ದ ಪ್ರತಿಭಟನಾಕಾರರು ಪೊಲೀಸರು ಹಾಕಿದ್ದ ಬ್ಯಾರಿಕೇಡ್‍ಗಳನ್ನು ತಮ್ಮ ಟ್ರ್ಯಾಕ್ಟರ್ ಗಳ ಮೂಲಕ ಕೀಳಲು ಮುಂದಾಗಿದ್ದರು. ಈ ವೇಳೆ ಪೊಲೀಸರು ಪ್ರತಿಭಟನಾ ನಿರತರ ಮೇಲೆ ಜಲಫಿರಂಗಿ ಹಾಗೂ ಅಶ್ರುವಾಯು ಪ್ರಯೋಗವನ್ನು ಮಾಡಿದ್ದಾರೆ.

ಇದಲ್ಲದೇ ಪರಿಸ್ಥಿತಿ ಕೈ ಮೀರುವ ಹಂತ ತಲುಪಿದಾಗ ಪೊಲೀಸರು ಲಾಠಿ ಪ್ರಹಾರವನ್ನೂ ಕೂಡ ನಡೆಸಿದ್ದಾರೆ. ಈ ವೇಳೆ ಹಲವು ರೈತರು ಗಾಯಗೊಂಡಿದ್ದಾರೆ. ಪ್ರತಿಭಟನಾ ನಿರತ ರೈತರು ಕೇಂದ್ರ ಸರ್ಕಾರ ಮತ್ತು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಈ ಪ್ರತಿಭಟನೆ ಹಿಂಸಾತ್ಮಾಕ ತಿರುವು ಪಡೆಯುತ್ತಿದ್ದು, ಪೊಲೀಸರು ವ್ಯಾಪಕ ಬಂದೋಬಸ್ತ್ ಕೈಗೊಂಡಿದ್ದಾರೆ.

ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ತಮ್ಮ ನಿವಾಸದಲ್ಲಿ ತುರ್ತು ಅಧಿಕಾರಿಗಳ ಸಭೆ ಕರೆದಿದ್ದು, ಸಭೆಯಲ್ಲಿ ರೈತರ ಬೇಡಿಕೆಗಳ ಕುರಿತು ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಅಲ್ಲದೆ ರೈತರು ದೆಹಲಿಗೆ ಆಗಮಿಸುವಷ್ಟರಲ್ಲಿ ಅವರ ಬೇಡಿಕೆಗಳನ್ನು ಈಡೇರಿಸುವ ಮೂಲಕ ಪ್ರತಿಭಟನೆಯನ್ನು ಶಾಂತರೂಪಕ್ಕೆ ತರುವ ಬಗ್ಗೆ ಮಾತುಕತೆ ನಡೆಸಲಾಗುತ್ತಿದೆ ಎನ್ನುವ ಮಾಹಿತಿಗಳು ಲಭ್ಯವಾಗಿವೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *