ಕೊರೊನಾ ಸೋಂಕಿತ ಗರ್ಭಿಣಿಗೆ ಗರ್ಭಪಾತ

PREGNANT

ಹುಬ್ಬಳ್ಳಿ: ಜಿಲ್ಲೆಯ ಕಿಮ್ಸ್‌ನಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಕೊರೊನಾ ಸೋಂಕಿತ ಗರ್ಭಿಣಿಗೆ ಇಂದು ಬೆಳಗ್ಗೆ ಗರ್ಭಪಾತ ಮಾಡಲಾಗಿದ್ದು, ಮಹಿಳೆಯ ಆರೋಗ್ಯ ಸ್ಥಿರವಾಗಿದೆ.

ಬಾಗಲಕೋಟೆ ಜಿಲ್ಲೆಯ ಬದಾಮಿ ತಾಲೂಕಿನ 23 ವರ್ಷದ ಮಹಿಳೆ ಕೊರೊನಾ ಕಾರಣದಿಂದ ಮಾನಸಿಕವಾಗಿ ತೀವ್ರವಾಗಿನೊಂದಿದ್ದರು. ದೇಹದಲ್ಲಿ ಸೋಡಿಯಮ್ ಅಂಶ ಕೂಡ ಕಡಿಮೆಯಾಗಿ ಸುಸ್ತಾಗಿದ್ದು, ಅಲ್ಸರ್ ಉಂಟಾಗಿ ಊಟ ಮಾಡಲು ಆಗುತ್ತಿರಲಿಲ್ಲ. ಜೊತೆಗೆ ಹಿಮೋಗ್ಲೋಬಿನ್ ಕಡಿಮೆಯಾಗಿ ರಕ್ತ ನೀಡಲಾಗಿತ್ತು. ಹೀಗಾಗಿ ಮಹಿಳೆ ಉಳಿಸಿಕೊಳ್ಳಲು ಗರ್ಭಪಾತ ಅನಿವಾರ್ಯವಾಗಿತ್ತು. ಆದ್ದರಿಂದ ವೈದ್ಯರು ಗರ್ಭಪಾತ ಮಾಡಿದ್ದಾರೆ.

ಇದಕ್ಕಾಗಿ ವಿಶೇಷ ತಂಡ ರಚನೆ ಮಾಡಿ ಮಹಿಳೆ ಕುಟುಂಬಕ್ಕೆ ಅಗತ್ಯತೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಮಾತ್ರೆಗಳನ್ನು ನೀಡುವ ಮೂಲಕ ಗರ್ಭಪಾತ ಮಾಡಲಾಗಿದೆ. ಮಹಿಳೆಯ ಆರೋಗ್ಯ ಸ್ಥಿರವಾಗಿದೆ ಎಂದು ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ ಅಂಟರತಾನಿ ತಿಳಿಸಿದ್ದಾರೆ.

ಬಾದಾಮಿ ತಾಲೂಕಿನ ಢಾಣಕಶಿರೂರ ಗ್ರಾಮದ ಗರ್ಭಿಣಿ ಕೋವಿಡ್ 19 ಸೋಂಕು ದೃಢಪಟ್ಟು ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮಹಿಳೆಯ ಇವರ ಆರೋಗ್ಯದ ದೃಷ್ಟಿಯಿಂದ ಮಾತ್ರೆಗಳನ್ನು ನೀಡಿ ಗರ್ಭಪಾತ ಮಾಡಲು ಕಿಮ್ಸ್ ಆಸ್ಪತ್ರೆಯ ವೈದ್ಯರು ಮುಂದಾಗಿದ್ದರು. ಕೊರೊನಾ ವೈರಸ್ ದೃಢಪಟ್ಟಿರುವ ಗರ್ಭಿಣಿಯ ಪತಿ ಸೇರಿದಂತೆ ಕುಟುಂಬದವರೆಲ್ಲ ಸರ್ಕಾರಿ ಕ್ವಾರಂಟೈನ್‍ನಲ್ಲಿದ್ದಾರೆ.

ಗರ್ಭಿಣಿ ಮಹಿಳೆಯು ಕಿಮ್ಸ್‌ಗೆ ದಾಖಲಾದ ಆರಂಭದ ದಿನಗಳಲ್ಲಿ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಮೇಲಿಂದ ಮೇಲೆ ಆರೋಗ್ಯದಲ್ಲಿ ಬದಲಾವಣೆಯಾಗುತ್ತಿರುವ ಕಾರಣ ವೈದ್ಯರು ಶಸ್ತ್ರಚಿಕಿತ್ಸೆ ಮಾಡುವ ಬದಲು ಪರಿಣಾಮಕಾರಿಯಾದ ಮಾತ್ರೆಗಳನ್ನು ನೀಡಿ ಗರ್ಭಪಾತ ಮಾಡಲು ನಿರ್ಧರಿಸಿದ್ದರು. ಅದರಂತೆಯೇ ಈಗ ಮಾತ್ರೆ ನೀಡಿ ಗರ್ಭಪಾತ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *