3 ದಿನದ ಹಿಂದೆಯೇ ಗೌರಿ ಲಂಕೇಶ್ ಹತ್ಯೆಗೆ ಯತ್ನ

– ಎರಡು ನಂಬರ್ ಗಳಿಂದ ನಿರಂತರ ಮಿಸ್ ಕಾಲ್, ಬ್ಲಾಂಕ್ ಮೆಸೇಜ್

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಮಾಹಿತಿ ಸಿಕ್ಕಿದೆ. ಮೂರು ದಿನದ ಹಿಂದೆಯೇ ಅಂದರೆ ಸೆಪ್ಟೆಂಬರ್ 2ರಿಂದಲೇ ಗೌರಿ ಲಂಕೇಶ್ ಹತ್ಯೆಗೆ ದುಷ್ಕರ್ಮಿಗಳು ಪ್ರಯತ್ನ ಮಾಡಿದ್ದರು ಎಂದು ತಿಳಿದುಬಂದಿದೆ.

ಸ್ಥಳೀಯರು ಎಂಟ್ರಿಕೊಟ್ಟಿದ್ದರಿಂದ ಅವತ್ತಿನ ಹತ್ಯೆ ಯತ್ನ ತಪ್ಪಿತ್ತು. ಹತ್ಯೆ ಪ್ಲಾನ್ ತಪ್ಪಿದ ಬಳಿಕ ಗೌರಿ ಲಂಕೇಶ್‍ಗೆ ಎರಡು ನಂಬರ್ ಗಳಿಂದ ನಿರಂತರ ಮಿಸ್ ಕಾಲ್ ಬರುತ್ತಿತ್ತು. ದುಷ್ಕರ್ಮಿಗಳು ಬ್ಲಾಂಕ್ ಮೆಸೇಜ್‍ಗಳನ್ನು ಕಳುಹಿಸ್ತಿದ್ದರು ಎಂಬ ಮಾಹಿತಿ ಸಿಕ್ಕಿದೆ.

ಮೂರು ದಿನದ ಹಿಂದೆಯೇ ದುಷ್ಕರ್ಮಿಗಳು ಗೌರಿ ಲಂಕೇಶ್‍ರನ್ನು ಫಾಲೋ ಮಾಡಿದ್ರು. ಖಾಸಗಿ ಕಾರ್ಯಕ್ರಮಕ್ಕೆ ಹೋಗಿದ್ದರಿಂದ ಹತ್ಯೆ ಮಿಸ್ ಆಗಿತ್ತು. ಮೂರು ದಿನದ ಹಿಂದೆಯೇ ವೈಟ್ ಕಲರ್ ಆಕ್ಟೀವಾ ಮಾದರಿಯ ಗಾಡಿ ನಿರಂತರವಾಗಿ ಮನೆಯ ಆಸುಪಾಸಿನಲ್ಲೇ ಓಡಾಡಿದೆ. ಪ್ರತಿಬಾರಿ ಬಂದಾಗ್ಲೂ ದುಷ್ಕರ್ಮಿಗಳು ಹೆಲ್ಮೆಟ್ ಧರಿಸಿದ್ದಾರೆ. ಶನಿವಾರ ಮಧ್ಯಾಹ್ನ ಮೂರು ಬಾರಿ ಮನೆಯ ಮುಂದೆಯೇ ಸುತ್ತುವರೆದಿರೋದು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಆದ್ರೆ ನಿನ್ನೆ ಮಿಸ್ ಆಗಲೇಬಾರದು ಅಂತ ಗಾಂಧಿನಗರದಿಂದ ಫಾಲೋ ಮಾಡಿದ್ರು. ಫಾಲೋ ಮಾಡಿ ಮನೆಯ ಅಂಗಳದಲ್ಲಿ ಒಬ್ಬ ಹಂತಕ ಕಾಯ್ತಾ ಇದ್ದ. ನಾಲ್ವರು ಗೌರಿ ಲಂಕೇಶ್‍ರನ್ನು ಹಿಂಬಾಲಿಸಿದ್ರು. ಅದ್ರಲ್ಲಿ ಒಬ್ಬ ಬೈಕ್ ಇಂದ ಇಳಿದು ಫೈರ್ ಮಾಡಿದ್ದ. ಮತ್ತಿಬ್ಬರು ಹೊರಗೆ ನಿಂತಿದ್ದು, ಮತ್ತೊಬ್ಬ ಒಬ್ಬನೇ ಕಾಯುತ್ತಾ ಕುಳಿತ್ತಿದ್ದ ಎಂದು ತಿಳಿದುಬಂದಿದೆ.

ಸದ್ಯ ಫೋನ್ ಡಿಟೈಲ್ಸ್ ನಲ್ಲಿ ಇಬ್ಬರು ಹಂತಕರ ಸುಳಿವು ಸಿಕ್ಕಿದ್ದು, ಪೊಲೀಸರು ಹಂತಕರ ಟ್ರ್ಯಾಕ್‍ನಲ್ಲಿದ್ದಾರೆ. ತನಿಖಾ ತಂಡದಿಂದ ನೆರೆಹೊರೆಯವರ ವಿಚಾರಣೆ ನಡೆಯುತ್ತಿದೆ. ಘಟನೆ ನಡೆದ ಸಂದರ್ಭದಲ್ಲಿ ಬಂದ ಸುತ್ತಮುತ್ತಲಿನ ನಿವಾಸಿಗಳಿಂದ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ. ಮನೆಯಲ್ಲಿದ್ದ ಕೆಲಸದವರಿಂದಲೂ ಮಾಹಿತಿ ಕಲೆ ಹಾಕಿದ್ದಾರೆ. ಗೌರಿ ಲಂಕೇಶ್ ಬಳಸುತ್ತಿದ್ದ ಮೊಬೈಲ್ ಹಾಗೂ ಮನೆ ಕೆಲಸದವರ ಮೊಬೈಲ್ ವಶಕ್ಕೆ ಪಡೆದು ರಾತ್ರಿಯೇ ಪರಿಶೀಲನೆ ನಡೆಸಿದ್ದಾರೆ.

ಅರೋಪಿಗಳು ಬಳಕೆ ಮಾಡಿದ್ದ ಬೈಕ್ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ರಾತ್ರಿ ನಗರದ ಎಲ್ಲಾ ಪ್ರಮುಖ ರಸ್ತೆಗಳಲ್ಲಿ ನಾಕಾಬಂದಿ ಹಾಕಿ ಪರಿಶೀಲನೆ ಮಾಡಿದ್ದಾರೆ. ನಗರದಿಂದ ಹೊರ ಹೋಗುವ ರಸ್ತೆಗಳಲ್ಲಿ ಬೈಕ್‍ಗಳ ತಪಾಸಣೆ ಮಾಡಿದ್ದು, ಪ್ರಮುಖವಾಗಿ ಮೈಸೂರು ರಸ್ತೆ, ಹಾಗೂ ನೈಸ್ ರಸ್ತೆಯಲ್ಲಿ ರಾತ್ರಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

ಮೈಸೂರು ರಸ್ತೆ ಹಾಗೂ ನೈಸ್ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಸಿಸಿಟಿವಿ ಪರಿಶೀಲನೆ ಕೂಡ ನಡೆಯುತ್ತಿದೆ. ಹಂತಕರು ಬೆಂಗಳೂರು ನಗರದಲ್ಲೆ ಉಳಿದಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

Comments

Leave a Reply

Your email address will not be published. Required fields are marked *