– ಟಿಕ್ ಟಾಕ್ ಮೂಲಕ ಗಮನ ಸೆಳೆದ ಮಗಳು
– ವಿಡಿಯೋ ನೋಡುತ್ತಿದ್ದಂತೆ ಸಹಾಯ ಮಾಡುವಂತೆ ಸಿಎಂ ಸೂಚನೆ
– ಪತ್ನಿಗೆ ಒಂದು ಕಿಡ್ನಿ ದಾನ ಮಾಡಿರುವ ಪತಿ
ಬೆಂಗಳೂರು: ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಮಹಿಳೆಗೆ ಆಪರೇಷನ್ ಮಾಡಿ ಕಿಡ್ನಿ ಕಸಿ ಮಾಡಿದರೂ, ಸೂಕ್ತ ಔಷಧಿ ಇಲ್ಲದೆ ನರಳಾಡುತ್ತಿದ್ದರು. ಇದಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ತಕ್ಷಣವೇ ಸ್ಪಂದಿಸಿದ್ದು, ಮಹಿಳೆಗೆ ಒಂದು ತಿಂಗಳ ಔಷಧಿ ವ್ಯವಸ್ಥೆ ಮಾಡುವಂತೆ ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.

ಬೆಳಗಾವಿಯ ಜಿಲ್ಲೆಯ ರಾಮದುರ್ಗ ತಾಲೂಕಿನ ನರಸಾಪುರ ಗ್ರಾಮದ ಶೇಖವ್ವ ಅರಂಭಾವಿ ಅವರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು. ಚಿಕಿತ್ಸೆ ವೇಳೆ ಪತಿ ಪತ್ನಿಗಾಗಿ ತಮ್ಮ ಒಂದು ಕಿಡ್ನಿ ದಾನ ಮಾಡಿದ್ದರು. ಜನವರಿ 17ರಂದು ಹುಬ್ಬಳ್ಳಿಯ ಎಸ್‍ಡಿಎಂ ಆಸ್ಪತ್ರೆಯಲ್ಲಿ ಕಿಡ್ನಿ ಕಸಿ ಮಾಡಲಾಗಿತ್ತು. ಆದರೆ ಲಾಕ್‍ಡೌನ್ ಘೋಷಣೆಯಾದ ಕಾರಣ ಶೇಖವ್ವ ಅವರಿಗೆ ಅಗತ್ಯ ಔಷಧಿಗಳು ದೊರೆಯದೆ ಸಾವು ಬದುಕಿನ ನಡುವೆ ಹೋರಾಡುತ್ತಿದ್ದರು.

ಏನು ಮಾಡುವುದು ಎಂದು ತೋಚನೆ ಅವರ ಕುಟುಂಬ ತೀವ್ರ ನೋವಿನಲ್ಲಿತ್ತು. ಆಗ ಶೇಖವ್ವ ಅವರ ಮಗಳು ಪವಿತ್ರ ಹೊಳಿದಿದ್ದೇ ಟಿಕ್ ಟಾಕ್. ಟಿಕ್ ಟಾಕ್‍ನಲ್ಲಿ ವಿಡಿಯೋ ಮಾಡಿ. ತನ್ನ ತಾಯಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿರುವ ಕುರಿತು ಪವಿತ್ರ ತಿಳಿಸಿದ್ದರು. ಅಲ್ಲದೆ ಮುಖ್ಯಮಂತ್ರಿಗಳು ಈ ಕುರಿತು ಸಹಾಯ ಮಾಡಬೇಕು ಎಂದು ಮನವಿ ಮಾಡಿದ್ದರು. ಈ ವಿಡಿಯೋ ಸಿಎಂ ಗಮನಕ್ಕೆ ಬಂದಿದ್ದು, ತಕ್ಷಣವೇ ಎಚ್ಚೆತ್ತ ಬಿಎಸ್‍ವೈ ಬೆಳಗಾವಿ ಜಿಲ್ಲಾಧಿಕಾರಿಳಿಗೆ ಕರೆ ಮಾಡಿ ಪರಿಹಾರಕ್ಕೆ ಸೂಚಿಸಿದ್ದಾರೆ.

ಬೆಳಗಾವಿಯ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಮೊಬೈಲ್ ಕರೆ ಮಾಡಿ ಶೇಖವ್ವ ಅರಂಭಾವಿ ಅವರಿಗೆ ತಕ್ಷಣವೇ ಒಂದು ತಿಂಗಳಿಗಾಗುವಷ್ಟು ಅಗತ್ಯ ಔಷಧಿಗಳನ್ನು ಪೂರೈಸಿ ಎಂದು ಆದೇಶಿಸಿದರು. ಸಿಎಂ ಆದೇಶಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ, ಶೇಖವ್ವ ಅರಂಭಾವಿ ಅವರಿಗೆ ಅಗತ್ಯ ಔಷಧಿ ಪೂರೈಸಿ, ಈ ಬಗ್ಗೆ ಮುಖ್ಯಮಂತ್ರಿಗಳಿಗೆ ವರದಿ ಸಲ್ಲಿಸಿದ್ದಾರೆ.

Leave a Reply