ದಬಾಂಗ್‍ನಿಂದ ಸುಂದರ ಕ್ಷಣಗಳ ಬುತ್ತಿ ಹೊತ್ತು ತಂದ ಸುದೀಪ್

ಬೆಂಗಳೂರು: ಚಂದನವನದ ಸ್ವಾತಿಮುತ್ತು, ಅಭಿನಯ ಚಕ್ರವರ್ತಿ ಸುದೀಪ್ ಬಾಲಿವುಡ್ ನ ಬಹುನಿರೀಕ್ಷಿತ ದಬಾಂಗ್-3 ಸಿನಿಮಾದಲ್ಲಿ ನಟಿಸುತ್ತಿರೋದು ಎಲ್ಲರಿಗೂ ತಿಳಿದಿದೆ. ಸದ್ಯ ಮೊದಲ ಶೆಡ್ಯೂಲ್ ಶೂಟಿಂಗ್ ಮುಗಿಸಿಕೊಂಡಿರುವ ಸುದೀಪ್ ದಬಾಂಗ್ ಸೆಟ್ ನಿಂದ ಸುಂದರ ಕ್ಷಣಗಳನ್ನು ಹೊತ್ತುಕೊಂಡು ಮನೆಗೆ ಬಂದಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಕಿಚ್ಚ, ಮೊದಲ ಶೂಟಿಂಗ್ ಶೆಡ್ಯೂಲ್ ರೋಮಾಂಚನವಾಗಿತ್ತು. ಇಲ್ಲಿಂದ ಹಲವು ಸಲ್ಮಾನ್ ಖಾನ್, ಸೋಹೈಲ್ ಖಾನ್, ಅರ್ಬಾಜ್ ಖಾನ್, ಸೋನಾಕ್ಷಿ ಸಿನ್ಹಾ, ಪ್ರಭುದೇವ್ ಟೀಮ್ ಜೊತೆಗೆ ಕಳೆದ ಸುಂದರ ಕ್ಷಣಗಳನ್ನು ಹೊತ್ತು ಮನೆಯತ್ತ ಸಾಗುತ್ತಿದ್ದೇನೆ. ಸಲ್ಮಾನ್ ಖಾನ್ ತಂದೆ ಸಲೀಂ ಸಾಬ್ ಕುಟುಂಬದ ಜೊತೆಗಿನ ಫೋಟೋವನ್ನು ಅಪ್ಲೋಡ್ ಮಾಡಿಕೊಂಡಿದ್ದಾರೆ. ಈಗ ಕೋಟಿಗೊಬ್ಬ-3ರ ಶೂಟಿಂಗ್ ಕೆಲಸ ಆರಂಭ ಎಂಬ ಸಿಹಿ ಸುದ್ದಿಯನ್ನು ನೀಡಿದ್ದಾರೆ.

ಕನ್ನಡ ಮಾತ್ರವಲ್ಲದೇ ತೆಲಗು, ತಮಿಳು, ಹಿಂದಿ ಸಿನಿ ಅಂಗಳದಲ್ಲಿ ಸುದೀಪ್ ತಮ್ಮದೇ ಗುರುತು ಹೊಂದಿದ್ದಾರೆ. ಚಂದನವನದಲ್ಲಿ ಹೀರೋ ಆಗಿ ಮಿಂಚುವ ಸುದೀಪ್ ಪರಭಾಷೆಯ ಸಿನಿಮಾಗಳಲ್ಲಿ ವಿಲನ್ ಪಾತ್ರದಲ್ಲಿಯೇ ಹೆಚ್ಚು ಜನಪ್ರಿಯತೆಯನ್ನು ಹೊಂದಿದ್ದಾರೆ. ದಬಾಂಗ್ ಚಿತ್ರದಲ್ಲಿ ಸಿಖಂದರ್ ಎಂಬ ಪಾತ್ರದಲ್ಲಿ ಕಿಚ್ಚ ನಟಿಸಿದ್ದು, ಚಿತ್ರ ಕ್ರಿಸ್‍ಮಸ್ ಹಬ್ಬಕ್ಕೆ ಬಿಡುಗಡೆಗೊಳ್ಳುವ ಸಾಧ್ಯತೆಗಳಿವೆ.

2016ರಲ್ಲಿ ತೆರೆಕಂಡು ಹವಾ ಕ್ರಿಯೇಟ್ ಮಾಡಿದ್ದ ಕೋಟಿಗೊಬ್ಬ-2 ಮುಂದುವರಿದ ಕಥೆಯೇ ಕೋಟಿಗೊಬ್ಬ-3. ಈಗಾಗಲೇ ವಿದೇಶಗಳಲ್ಲಿ ಸಾಹಸ ದೃಶ್ಯಗಳ ಚಿತ್ರೀಕರಣ ಮುಗಿಸಿಕೊಂಡಿರುವ ಚಿತ್ರ ಕೊನೆಯ ಹಂತದಲ್ಲಿದೆ. ದಬಾಂಗ್ ಶೂಟಿಂಗ್ ಮುಗಿದಿದ್ದು, ಕಿಚ್ಚ ಸುದೀಪ್ ಕೋಟಿಗೊಬ್ಬ-3ರತ್ತ ಮುಖ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *