ಶ್ರೀದೇವಿ ನಿಧನಕ್ಕೆ ಕಂಬನಿ ಮಿಡಿದ ನಟ ಕಿಚ್ಚ ಸುದೀಪ್

ಬೆಂಗಳೂರು: ಬಾಲಿವುಡ್ ನ ಹಿರಿಯ ನಟಿ ಶ್ರೀದೇವಿ ನಿಧನಕ್ಕೆ ನಟ ಕಿಚ್ಚ ಸುದೀಪ್ ಕಂಬನಿ ಮಿಡಿದಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಸುದೀಪ್, ಇಂಥ ದೊಡ್ಡ ನಟಿಯೊಂದಿಗೆ ಸ್ವಲ್ಪ ಸಮಯವಾದ್ರೂ ಹಂಚಿಕೊಳ್ಳುವ ಅವಕಾಶ ನನಗೆ ಸಿಕ್ಕಿದ್ದಕ್ಕೆ ನಾನು ಅದೃಷ್ಟಶಾಲಿ ಎಂದು ಹೇಳಲಾ? ಅಥವಾ ಪುಣ್ಯವಂತ ಎನ್ನಲಾ? ಸಾಕಷ್ಟು ಜನರಿಗೆ ಸ್ಫೂರ್ತಿಯಾಗಿದ್ದ, ಮುಂದೆಯೂ ಸ್ಫೂರ್ತಿಯಂತಿರುವ ಮಹಿಳೆ ಅವರು. ಕೆಲವು ಸಂಗತಿಗಳು ನಂಬಲು ಕಷ್ಟ. ಅದನ್ನ ಸ್ವೀಕರಿಸುವುದು ಇನ್ನೂ ಕಷ್ಟ. ತುಂಬಾ ನೋವಾಗಿದೆ. ಶ್ರೀದೇವಿ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹೇಳಿದ್ದಾರೆ.

2015ರಲ್ಲಿ ಬಿಡುಗಡೆಯಾದ ತಮಿಳಿನ ಪುಲಿ ಸಿನಿಮಾದಲ್ಲಿ ಶ್ರೀದೇವಿ ಅವರ ಜೊತೆ ಕಿಚ್ಚ ಸುದೀಪ್ ನಟಿಸಿದ್ದರು. ನಟಿ ಶ್ರೀದೇವಿ(54) ಹೃದಯಾಘಾತದಿಂದ ದುಬೈಯಲ್ಲಿ ಶನಿವಾರ ರಾತ್ರಿ ಮೃತಪಟ್ಟಿದ್ದಾರೆ. ಶ್ರೀದೇವಿ ತಮ್ಮ ಪತಿ ಬೋನಿ ಕಪೂರ್ ಮತ್ತು ಕಿರಿಯ ಪುತ್ರಿ ಖುಷಿ ಜೊತೆ ಸಂಬಂಧಿಕರ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಲು ದುಬೈಗೆ ತೆರಳಿದ್ದರು. ಈ ಸಂದರ್ಭದಲ್ಲಿ ಹೃದಯಾಘಾತಗೊಂಡು ನಿಧನರಾಗಿದ್ದಾರೆ.

ಕನ್ನಡದ ಭಕ್ತಕುಂಬಾರ, ಬಾಲಭಾರತ, ಹೆಣ್ಣು ಸಂಸಾರದ ಕಣ್ಣು, ಯಶೋಧ ಕೃಷ್ಣ, ಸಂಪೂರ್ಣ ರಾಮಯಣ, ಪ್ರಿಯಾದಲ್ಲಿ ಶ್ರೀದೇವಿ ನಟಿಸಿದ್ದರು. ರೆಬಲ್ ಸ್ಟಾರ್ ಅಂಬರೀಶ್, ರಜನಿಕಾಂತ್ ಜೊತೆ ಅಭಿನಯಿಸಿದ್ದ ಶ್ರೀದೇವಿ 80ರ ದಶಕದಲ್ಲಿ ಬಾಲಿವುಡ್ ಪ್ರಸಿದ್ಧ ಕಲಾವಿದೆಯಾಗಿ ಮಿಂಚಿದ್ದರು.

 

Comments

Leave a Reply

Your email address will not be published. Required fields are marked *