ಕೆಜಿಎಫ್ ಪ್ರಭೆಯಲ್ಲಿ ಹೊಂಬಾಳೆ ದಾಖಲೆ!

ಬೆಂಗಳೂರು: ಯಶ್ ಅಭಿನಯದ ಕೆಜಿಎಫ್ ಚಿತ್ರವೀಗ ಭಾರತೀಯ ಚಿತ್ರರಂಗವೇ ತಿರುಗಿ ನೋಡುವಂತೆ ಅಬ್ಬರದ ಅಲೆ ಶುರುವಿಟ್ಟಿದೆ. ಕನ್ನಡ ಚಿತ್ರವೊಂದು ಬಾಲಿವುಡ್ ಚಿತ್ರಗಳನ್ನೇ ಮೀರಿಸಿ ಟಾಕ್ ಕ್ರಿಯೇಟ್ ಮಾಡೋದೇನೂ ಕಡಿಮೆ ವಿಚಾರವಲ್ಲ. ಅದರ ರೂವಾರಿಯಾಗಿರೋ ಕೆಜಿಎಫ್ ಚಿತ್ರದ ಹಿಂದೆ ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯ ಕನಸಿದೆ. ಈ ಸಂಸ್ಥೆಯೀಗ ಕನ್ನಡ ಚಿತ್ರರಂಗಕ್ಕೇ ಕಿರೀಟದಂಥಾದ್ದೊಂದು ಕೆಲಸ ಮಾಡಲೂ ಮುಂದಾಗಿದೆ.

ದೇಶಾದ್ಯಂತ ಸುದ್ದಿ ಮಾಡಿದ ಬೇರೆ ಭಾಷೆಗಳ ಚಿತ್ರಗಳ ಕಾರ್ಯಕ್ರಮಗಳಿಗೆ ಕನ್ನಡದ ಮಾಧ್ಯಮಕ್ಕೆ ಆಗಾಗ ಕರೆ ಬರೋದಿದೆ. ಆದರೆ ಬೇರೆ ಭಾಷೆಗಳ ಮಾಧ್ಯಮ ಮಂದಿಯೇ ಕನ್ನಡ ಚಿತ್ರದ ಕಾರ್ಯಕ್ರಮಕ್ಕೆ ಬೆಂಗಳೂರಿಗೆ ಬಂದಿಳಿದದ್ದಿಲ್ಲ. ಆದರೀಗ ಕೆಜಿಎಫ್ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮಕ್ಕೆ ತೆಲುಗು ಮತ್ತು ತಮಿಳು ಮಾಧ್ಯಮದವರೇ ಬೆಂಗಳೂರಿಗೆ ಬರುವಂತೆ ಮಾಡಿದೆ!

ಇದೇ ತಿಂಗಳ 9ರಂದು ಅದ್ಧೂರಿ ಸಮಾರಂಭವೊಂದರ ಮೂಲಕ ಕೆಜಿಎಫ್ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ನಡೆಯಲಿದೆ. ಅದಕ್ಕೆ ತೆಲುಗು ಮತ್ತು ತಮಿಳು ಮಾಧ್ಯಮಗಳಿಗೂ ಆಹ್ವಾನ ಹೋಗಿದೆ. ಅವರೂ ಕೂಡಾ ಬರಲು ಉತ್ಸುಕರಾಗಿದ್ದಾರೆ. ಇದು ನಿಜಕ್ಕೂ ಕನ್ನಡ ಚಿತ್ರರಂಗದ ಘನತೆಯನ್ನು ದಕ್ಷಿಣ ಭಾರತೀಯ ಚಿತ್ರ ರಂಗಕ್ಕೆ ಪರಿಚಯಿಸುವಂಥಾ ವಿದ್ಯಮಾನ.

ಇದುವರೆಗೂ ಸಾಲು ಸಾಲಾಗಿ ಹಿಟ್ ಚಿತ್ರಗಳನ್ನು ನಿರ್ಮಾಣ ಮಾಡುತ್ತಾ, ಒಳ್ಳೆಯ ಚಿತ್ರಗಳನ್ನು ವಿತರಣೆ ಮಾಡೋ ಮೂಲಕ ಚಿತ್ರರಂಗದ ಭಾಗವಾಗಿರುವ ಸಂಸ್ಥೆ ಹೊಂಬಾಳೆ. ಈಗ ಬೃಹದಾಕಾರವಾಗಿ ಬೆಳೆದು ನಿಂತಿರೋ ಈ ಸಂಸ್ಥೆ ಕೆಜಿಎಫ್ ಚಿತ್ರವನ್ನು ಬಹು ಕೋಟಿ ವ್ಯಯಿಸಿ ರೂಪಿಸಿದೆ. ಜೊತೆಗೆ ಇಂಥಾದ್ದೊಂದು ದಾಖಲೆಗೂ ರೂವಾರಿಯಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *